Advertisement

NIA; ಉಗ್ರರನ್ನು ಬೇರು ಸಹಿತ ಕಿತ್ತೂಗೆಯಲೇಬೇಕು

11:33 PM Dec 10, 2023 | Team Udayavani |

ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ನಿಷೇಧಿತ ಉಗ್ರಗಾಮಿ ಸಂಘಟನೆ ಯಾಗಿರುವ ಐಸಿಸ್‌ನೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶನಿವಾರ ದೇಶದ ವಿವಿಧೆಡೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ 15 ಮಂದಿ ಶಂಕಿತ ಉಗ್ರರನ್ನು ಬಂಧಿಸಿರುವುದು ದೇಶದಲ್ಲಿನ್ನೂ ಉಗ್ರರ ಜಾಲ ಸಕ್ರಿಯವಾಗಿರುವುದನ್ನು ಸಾಬೀತುಪಡಿಸಿದೆ. ಈ ಬೆಳವಣಿಗೆ ಸಹಜವಾಗಿಯೇ ದೇಶದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

Advertisement

ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಈ ಶಂಕಿತ ಉಗ್ರರನ್ನು ಬಂಧಿಸಿ, ಅವರಿಂದ ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಸಾಧನಗಳು, ಅಪಾರ ಪ್ರಮಾಣದ ನಗದು ಮತ್ತು ಡಿಜಿಟಲ್‌ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಮೂರು ತಿಂಗಳ ಹಿಂದೆ ಇಂತಹುದೇ ಆರೋಪದ ಮೇಲೆ ಬಂಧಿತನಾಗಿದ್ದ ತೀರ್ಥಹಳ್ಳಿ ಮೂಲದ ಅರಾಫ‌ತ್‌ ಆಲಿ ತನಿಖೆಯ ವೇಳೆ ನೀಡಿದ ಹೇಳಿಕೆಯನ್ನು ಆಧರಿಸಿ ಎನ್‌ಐಎ ಅಧಿಕಾರಿಗಳು ಈ ದಾಳಿಯನ್ನು ಕೈಗೊಂಡಿದ್ದರು. ಬಂಧಿತರಾದ ಎಲ್ಲ ಶಂಕಿತ ಉಗ್ರರು ಸಾಮಾನ್ಯರಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡು ಜನನಿಬಿಡ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದ್ದರು. ತಮ್ಮ ದಿನಚರಿಯ ನಡುವೆ ಯಾರಿಗೂ ಅನುಮಾನ ಬಾರದಂತೆ ಅತ್ಯಂತ ರಹಸ್ಯವಾಗಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸುತ್ತಿದ್ದರು ಎಂಬುದು ಬಹಿರಂಗವಾಗಿದೆ. ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಈ ಉಗ್ರರು ಸಾಮಾಜಿಕ ಜಾಲತಾಣಗಳಲ್ಲಿ ಐಸಿಸ್‌ ಪರವಾಗಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಯುವಕರನ್ನು ಉಗ್ರಗಾಮಿ ಸಂಘಟನೆಯತ್ತ ಸೆಳೆಯುವ ಕಾರ್ಯದಲ್ಲಿ ನಿರತವಾಗಿದ್ದರು. ಐಸಿಸ್‌ನ ಚಿಂತನೆಯ ಕುರಿತಂತೆ ಯುವಕರಿಗೆ ಪ್ರಮಾಣವಚನ ಬೋಧಿಸುವ ಮೂಲಕ ಅವರನ್ನು ಮೂಲಭೂತವಾದಿಗಳನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ಈ ಯುವಕರು ಶಾಮೀಲಾಗಿದ್ದುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೆ ಬಂಧಿತರ ಪೈಕಿ ಬಹುತೇಕರು ಐಸಿಸ್‌ನ ಪ್ರಮುಖ ನಾಯಕರ ಸಂಪರ್ಕ ಹೊಂದಿರುವುದು ಮತ್ತು ವಿದೇಶಗಳಿಂದ ಹಣಕಾಸು ನೆರವು ಲಭಿಸುತ್ತಿದ್ದ ಬಗ್ಗೆಯೂ ಎನ್‌ಐಎ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.

ಉಗ್ರರು ಮತ್ತವರಿಗೆ ಆಶ್ರಯ ಹಾಗೂ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ಕಳೆದೊಂದು ದಶಕದಿಂದೀಚೆಗೆ ಕೇಂದ್ರ ಸರಕಾರವು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದ್ದರೂ ಇನ್ನೂ ದೇಶದ ವಿವಿಧೆಡೆಗಳಲ್ಲಿ ಉಗ್ರರು ಅತ್ಯಂತ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿರುವುದು ಜನರಲ್ಲಿ ಅನುಮಾನಗಳನ್ನು ಮೂಡಿಸಿದೆ. ಉಗ್ರರು ತಮ್ಮ ಸಂಚನ್ನು ಕಾರ್ಯರೂಪಕ್ಕೆ ತರಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿರುವ ಬಗೆಗೆ ತನಿಖಾ ಸಂಸ್ಥೆಗಳು ಇನ್ನಷ್ಟು ಹೆಚ್ಚಿನ ಲಕ್ಷ್ಯ ಹರಿಸಬೇಕಿದೆ. ಈ ಬಗ್ಗೆ ಸಂಬಂಧಿತ ಸಂಸ್ಥೆಗಳಿಗೂ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿ, ತಂತ್ರಜ್ಞಾನದ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕಿದೆ.

ಭಯೋತ್ಪಾದಕ ಕೃತ್ಯಗಳ ಮೂಲಕ ದೇಶದ ಶಾಂತಿ, ಭದ್ರತೆಗೆ ಭಂಗ ತರು ವಂತಹ ಪ್ರಯತ್ನಗಳ ವಿರುದ್ಧ ಸರಕಾರ ಇನ್ನಷ್ಟು ಕಠಿನ ಕ್ರಮ ಕೈಗೊಳ್ಳಲೇಬೇಕು. ಈ ವಿಷಯದಲ್ಲಿ ಯಾರದ್ದೇ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಉಗ್ರರ ಮೂಲೋತ್ಪಾಟನೆಯ ನಿಟ್ಟಿನಲ್ಲಿ ದೇಶದ ಭದ್ರತಾ ಪಡೆಗಳು ಮತ್ತು ತನಿಖಾ ಸಂಸ್ಥೆಗಳಿಗೆ ಪೂರ್ಣ ಸ್ವಾತಂತ್ರ್ಯವನ್ನು ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ನೀಡಬೇಕು. ಉಗ್ರರನ್ನು ಸ್ವಹಿತಾಸಕ್ತಿಯ ಈಡೇರಿಕೆಗಾಗಿ ಬಳಸಿಕೊಳ್ಳುವ ಶಕ್ತಿಗಳ ವಿರುದ್ಧವೂ ಸರಕಾರ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next