ಜಮ್ಮು : ಪಂಜಾಬ್ ಮತ್ತು ಜಮ್ಮು ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟಿರುವ ಪೊಲೀಸರ ಮೇಲೆ ಉಗ್ರ ಝಕೀರ್ ಮೂಸಾ ಅಕಾ ಝಕೀರ್ ರಶೀದ್ ಭಟ್ ಭಯೋತ್ಪಾದಕ ದಾಳಿ ನಡೆಸುವ ಯೋಜನೆ ಹಾಕಿಕೊಂಡಿದ್ದಾನೆ ಎಂದು ಗುಪ್ತಚರ ದಳ ಎಚ್ಚರಿಕೆ ನೀಡಿದೆ.ಅಂತೆಯೇ ಎರಡೂ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಅನ್ಸಾರ್ ಗಝವತ್ ಉಲ್ ಹಿಂದ್ ಉಗ್ರ ಸಂಘಟನೆಯ ನೇತೃತ್ವ ವಹಿಸಿರುವ ಝಕೀರ್ ಮೂಸಾ ಜಮ್ಮು ಕಾಶ್ಮೀರಕ್ಕೆ ತಾನು ನೇಮಿಸಿಕೊಂಡಿರುವ ಉಗ್ರರನ್ನು ಭಯೋತ್ಪಾದಕ ದಾಳಿಯ ಯೋಜನೆಗಳೊಂದಿಗೆ ಕಳುಹಿಸುತ್ತಿದ್ದಾನೆ ಎಂದು ಗುಪ್ತಚರ ದಳ ತಿಳಿಸಿದೆ.
ಉಪ ನಾಯಕ ರೆಹಾನ್ ನ ನೆರವಿನೊಂದಿಗೆ ಮೂಸಾ ಪೊಲೀಸ್ ದಳದ ಮೇಲೆ ಫಿದಾಯೀಂ ದಾಳಿಗಳನ್ನು ನಡೆಸಲಿದ್ದಾನೆ. ಇದಕ್ಕಾಗಿ ಆತ ಹೊಸದಾಗಿ ನೇಮಕಾತಿಗಳನ್ನು ಮಾಡಿಕೊಂಡಿದ್ದಾನೆ ಎಂದು ಗುಪ್ತಚರ ದಳ ಹೇಳಿದೆ.
ಫಿದಾಯೀಂ ದಾಳಿಗಳಿಗಾಗಿ ರೆಹಾನ್ ಅತೀ ಮುಖ್ಯ ತಾಣಗಳು, ಪೊಲೀಸ್ ಕಾರ್ಯಾಲಯಗಳು, ಭದ್ರತಾ ಪಡೆಗಳ ಶಿಬಿರಗಳು ಮತ್ತು ಸರಕಾರದ ಮುಖ್ಯ ಕಾರ್ಯಾಲಯಗಳಿರುವ ಕಟ್ಟಡಗಳ ವಿವರಗಳನ್ನು ಕಲೆ ಹಾಕಿದ್ದಾನೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರಿಂದ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಈಗಾಗಲೇ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಮೂಸಾ ಫಿದಾಯೀಂ ದಾಳಿಗಳ ಬಗೆಗಿನ ಮುನ್ನೆಚ್ಚರಿಕೆಗೆ ಹೆಚ್ಚು ಮಹತ್ವ ದೊರಕಿದೆ.