ಇಸ್ಲಾಮಾಬಾದ್: 1999ರಲ್ಲಿ ಏರ್ ಇಂಡಿಯಾದ ಐಸಿ-814 ವಿಮಾನವನ್ನು ಹೈಜಾಕ್ ಮಾಡಿದ್ದ ಉಗ್ರರಲ್ಲಿ ಒಬ್ಬನಾದ ಝಹೂರ್ ಮಿಸ್ತ್ರಿ ಅಲಿಯಾಸ್ ಝಾಹಿದ್ ಅಖುಂದ್ ಪಾಕಿಸ್ತಾನದಲ್ಲಿ ಹತ್ಯೆಗೀಡಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಷ್ಯಾ ದಾಳಿಗೆ ಉಕ್ರೇನ್ ನ 202 ಶಾಲೆಗಳು, 34 ಆಸ್ಪತ್ರೆಗಳು, 1500 ವಸತಿ ಕಟ್ಟಡಗಳು ನಾಶ!
ಮಾರ್ಚ್ 01ರಂದು ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ಆತನ ಮನೆಯಲ್ಲಿಯೇ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ನಡೆದಿದೆ. ಝಹೂರ್ ಜೈಶ್ ಎ ಮುಹಮ್ಮದ್ ಉಗ್ರಗಾಮಿ ಸಂಘಟನೆ ಜತೆ ಗುರುತಿಸಿಕೊಂಡಿದ್ದು, ಈತ ಪಾಕಿಸ್ತಾನದಲ್ಲಿ ಉದ್ಯಮಿ ಎಂಬಂತೆ ಬಿಂಬಿಸಿಕೊಂಡು ಅಡಗಿಕೊಂಡಿರುವುದಾಗಿ ವರದಿ ವಿವರಿಸಿದೆ.
ಇಬ್ಬರು ದಾಳಿಕೋರರು ಬೈಕ್ ನಲ್ಲಿ ಆಗಮಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಮಾಸ್ಕ್ ಧರಿಸಿದ್ದರಿಂದ ಅವರು ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಬೈಕ್ ನಲ್ಲಿ ಇಡೀ ಪ್ರದೇಶದಲ್ಲಿ ಸುತ್ತಾಡಿದ್ದು, ಬಳಿಕ ಝಹೂರ್ ಮೇಲೆ ದಾಳಿ ನಡೆಸಿದ್ದರು ಎಂದು ವರದಿ ತಿಳಿಸಿದೆ.
ಭಾರತದ ಜೈಲಿನಲ್ಲಿ ಕೈದಿಗಳಾಗಿದ್ದ ಜೈಶ್ ಎ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್, ಭಯೋತ್ಪಾದಕ ಸಂಘಟನೆಯ ಅಲ್ ಉಮರ್ ಮುಜಾಹಿದೀನ್, ಮುಷ್ತಾಕ್ ಅಹ್ಮದ್ ಝರ್ಗಾರ್ ಮತ್ತು ಬ್ರಿಟನ್ ಮೂಲದ ಅಲ್ ಖೈದಾ ಮುಖಂಡ ಅಹ್ಮದ್ ಒಮರ್ ಸಹೀದ್ ಶೇಕ್ ನನ್ನು ಬಿಡುಗಡೆಗೊಳಿಸಲು 1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಉಗ್ರರು ಹೈಜಾಕ್ ಮಾಡಿದ್ದರು.
ಏರ್ ಇಂಡಿಯಾ ವಿಮಾನದಲ್ಲಿ 176 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಸುಮಾರು ಏಳು ದಿನಗಳ ಕಾಲ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿತ್ತು. ಕಾಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ಉಗ್ರರು ಹೈಜಾಕ್ ಮಾಡಿ ಅಫ್ಘಾನಿಸ್ತಾನದ ಕಂದಾಹಾರ್ ಗೆ ತೆಗೆದುಕೊಂಡು ಹೋಗಿದ್ದರು.
ಕೊನೆಗೂ ಪ್ರಯಾಣಿಕರ ರಕ್ಷಣೆಗಾಗಿ ಉಗ್ರರ ಬೇಡಿಕೆಗೆ ಮಣಿದ ಅಂದಿನ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ಭಯೋತ್ಪಾದಕ ಮಸೂದ್ ಸೇರಿದಂತೆ ಐವರು ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.