ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಆಂತರಿಕ ಭದ್ರತಾ ವಿಭಾಗದಡಿ (ಐಎಸ್‌ಡಿ) ತರಬೇತಿ ಮುಗಿಸಿರುವ ನಗರ ಭಯೋತ್ಪಾದನ ನಿಗ್ರಹ ತಂಡದಿಂದ ಕಾರ್ಯಾಚರಣೆ ಅಣಕು ಪ್ರದರ್ಶನ ಗುರುವಾರ ನಗರದ ಪೊಲೀಸ್ ಮೈದಾನದಲ್ಲಿ ಜರಗಿತು.
ಭಯೋತ್ಪಾದಕ ದಾಳಿ ಸಂದರ್ಭ ಈ ಕಮಾಂಡೊ ಪಡೆ ಯಾವ ರೀತಿಯಲ್ಲಿ ಕಾರ್ಯಾಚರಿಸಲಿದೆ ಎಂಬ ಬಗ್ಗೆ ಪ್ರದರ್ಶನ ನೀಡಲಾಯಿತು.
30 ಮಂದಿಯ ತಂಡ :
ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಪೊಲೀಸಿಂಗ್ ಎಂದರೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಚಟುವಟಿಕೆಗಳನ್ನು ಪತ್ತೆ ಹಚ್ಚುವುದು ಮಾತ್ರವಲ್ಲ, ಕರಾವಳಿ ತೀರದಲ್ಲಿ ಯಾವುದೇ ರೀತಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯ ಮೊದಲಾದ ಕ್ಲಿಷ್ಟಕರ ಸಂದರ್ಭದಲ್ಲಿ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ನಗರ ಸ್ಪೆಷಲ್ ವೆಪನ್ ಆ್ಯಂಡ್ ಟ್ಯಾಕ್ಟಿಕ್ಟ್ (ನಗರ ಸ್ವಾಟ್) ತಂಡ ತರಬೇತಿ ಪಡೆದು ಕಾರ್ಯಾಚರಣೆಗೆ ಸಿದ್ಧಗೊಂಡಿದೆ. ಆಂತರಿಕ ಭದ್ರತಾ ವಿಭಾಗದಡಿ (ಐಎಸ್‌ಡಿ) ಮಂಗಳೂರು ಈ ನಗರ ಭಯೋತ್ಪಾದನ ನಿಗ್ರಹ ತಂಡ ಕಾರ್ಯ ನಿರ್ವಹಿಸುತ್ತದೆ. ಒಟ್ಟು 30 ಮಂದಿಯ ತಂಡ ಇದಾಗಿದ್ದು, ಎರಡು ತಿಂಗಳ ಕಾಲ ವಿವಿಧ ರೀತಿಯ ತರಬೇತಿ ಒದಗಿಸಲಾಗಿದೆ ಎಂದವರು ಹೇಳಿದರು.
ಸಶಸ್ತ್ರ ಪಡೆಗೆ “ವರಣ್’ :
ಮಂಗಳೂರು ನಗರ ಪೊಲೀಸ್ ಸಶಸ್ತ್ರ ಮೀಸಲು ಪಡೆಗೆ (ಸಿಎಆರ್) ವರುಣ್ ಎಂಬ ನೀರಿನ ವಾಹನ ಸೇರ್ಪಡೆಯಾಗಿದ್ದು ಇದು ಅಧಿಕ ಪ್ರಮಾಣದ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಕಾನೂನು ಸುವ್ಯವಸ್ಥೆಯ ಸಂದರ್ಭದಲ್ಲಿ ಉದ್ರಿಕ್ತ ಜನರ ಗುಂಪನ್ನು ನೀರನ್ನು ಚಿಮ್ಮಿಸಿ ಚದುರಿಸುವಲ್ಲಿ ಈ ವಾಹನ ಕಾರ್ಯ ನಿರ್ವಹಿಸಲಿದೆ.ಡಿಸಿಪಿ ಹರಿರಾಂ ಶಂಕರ್, ದಿನೇಶ್ ಕುಮಾರ್, ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಚೆನ್ನವೀರಪ್ಪ ಹಡಪದ್ ಮೊದಲಾದವರು ಉಪಸ್ಥಿತರಿದ್ದರು.