Advertisement

ಪತ್ರಕರ್ತ ಬುಖಾರಿ ಹಂತಕನ ಹೊಡೆದುರುಳಿಸಿದ ಯೋಧರು

07:13 AM Nov 29, 2018 | |

ಶ್ರೀನಗರ: ಕಣಿವೆ ರಾಜ್ಯದಲ್ಲಿ ಸತತವಾಗಿ ಉಗ್ರರ ಹೆಡೆಮುರಿ ಕಟ್ಟುತ್ತಿರುವ ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ಎಂಬಂತೆ ಬುಧವಾರ ಬದ್ಗಾಂ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್‌-ಎ-ತೊಯ್ಬಾದ ಪ್ರಮುಖ ಭಯೋತ್ಪಾದಕ ನವೀದ್‌ ಜಟ್‌ನನ್ನು ಹೊಡೆದುರುಳಿಸಲಾಗಿದೆ. ಹಿರಿಯ ಪತ್ರಕರ್ತ ಶುಜಾತ್‌ ಬುಖಾರಿ ಅವರನ್ನು ಹತ್ಯೆಗೈದ ಆರೋಪಿಗಳ ಪೈಕಿ ನವೀದ್‌ ಪ್ರಮುಖ ಪಾತ್ರ ವಹಿಸಿದ್ದ. 5 ತಿಂಗಳ ಹಿಂದೆ ಲಷ್ಕರ್‌ ಉಗ್ರರು ಮತ್ತು ಇಬ್ಬರು ಸ್ಥಳೀಯರು ಸೇರಿ ಬುಖಾರಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು.

Advertisement

ಉಗ್ರ ನವೀದ್‌ ಜಟ್‌ ಪಾಕಿಸ್ತಾನಿ ನಾಗರಿಕನಾಗಿದ್ದು, ಆತನ ಮೃತದೇಹವನ್ನು ಒಯ್ಯುವಂತೆ ಪಾಕಿಸ್ತಾನಕ್ಕೆ ಪತ್ರ ಬರೆಯಿರಿ ಎಂದು ಕೇಂದ್ರ ಗೃಹ ಇಲಾಖೆಯನ್ನು ಕೋರಲಾಗುವುದು ಎಂದು ಜಮ್ಮು-ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಹೇಳಿದ್ದಾರೆ. ಬುಖಾರಿ ಅವರ ಹತ್ಯೆ ಬಳಿಕ ನವೀದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರಾದರೂ, ಫೆ.6 ರಂದು ಆತ ಶ್ರೀನಗರ ಆಸ್ಪತ್ರೆಯಿಂದ ತಪ್ಪಿಸಿ ಕೊಂಡಿದ್ದ. ಅವನನ್ನು ಬುಧವಾರದ ಕಾರ್ಯಾಚರಣೆಯಲ್ಲಿ ಜೀವಂತ ಸೆರೆಹಿಡಿದಿದ್ದರೆ ತನಿಖೆ ಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿತ್ತು ಎಂದೂ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ, ಎನ್‌ಕೌಂಟರ್‌ನಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಹಲವು ಎನ್‌ಕೌಂಟರ್‌ಗಳು ನಡೆದಿದ್ದು, ಲಷ್ಕರ್‌ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ಗೆ ಸೇರಿದ ಕನಿಷ್ಠ 18 ಉಗ್ರರನ್ನು ಸದೆಬಡಿಯಲಾಗಿದೆ.

ಕಸಬ್‌ ಜತೆ ತರಬೇತಿ ಪಡೆದಿದ್ದ!
ಹತ್ಯೆಗೀಡಾದ ಉಗ್ರ ನವೀದ್‌ ಜಟ್‌(20) ಅಲಿಯಾಸ್‌ ಅಬು ಹನlಲ್ಲಾ ಪಾಕಿಸ್ಥಾನದ ಮುಲ್ತಾನ್‌ನವನು. ಈತ ಪಾಕ್‌ನ ಲಷ್ಕರ್‌ ಕ್ಯಾಂಪ್‌ನಲ್ಲಿ 26/11ರ ಮುಂಬೈ ದಾಳಿಯ ಉಗ್ರ ಅಜ್ಮಲ್‌ ಕಸಬ್‌ ಜತೆಗೇ ತರಬೇತಿ ಪಡೆದಿದ್ದ. 2012ರಲ್ಲಿ ಭಾರತದೊಳಕ್ಕೆ ನುಸುಳುವ ಮುನ್ನ ಒಂದೇ ಮದರಸಾದಲ್ಲಿ ಇಬ್ಬರೂ ತರಬೇತಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನವೀದ್‌ ಕಂಪಾಸ್‌, ಜಿಪಿಎಸ್‌, ವೈರ್‌ಲೆಸ್‌ ಸೆಟ್‌ಗಳು, ಶಸ್ತ್ರಾಸ್ತ್ರಗಳ ನಿರ್ವಹಣೆಯಲ್ಲಿ ನುರಿತ ವನಾಗಿದ್ದ. 2012ರ ಅಕ್ಟೋಬರ್‌ನಲ್ಲಿ ತನ್ನ ಸಹಚರರ ಜೊತೆಗೇ ಕಾಶ್ಮೀರ ಕಣಿವೆಗೆ ಕಾಲಿಟ್ಟಿದ್ದ. ಬಳಿಕ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹೈದರ್‌ಪೋರಾದಲ್ಲಿ ಸೇನೆ ಮೇಲಿನ ದಾಳಿ, ಸಿಲ್ವರ್‌ ಸ್ಟಾರ್‌ ಹೊಟೇಲ್‌ ದಾಳಿ, ಪೊಲೀಸ್‌ ಮತ್ತು ಸಿಆರ್‌ಪಿಎಫ್ ಶಿಬಿರದ ಮೇಲೆ ನಡೆದ 3 ದಾಳಿ ಪ್ರಕರಣಗಳಲ್ಲಿ  ಪ್ರಮುಖ ಪಾತ್ರ ವಹಿಸಿದ್ದ. ಹಲವು ಬ್ಯಾಂಕ್‌ ದರೋಡೆ, ಗ್ರೆನೇಡ್‌ ದಾಳಿ ಗಳಲ್ಲೂ ಭಾಗಿಯಾಗಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ನವೀದ್‌ ಎಸ್ಕೇಪ್‌ ಆಗುವುದರಲ್ಲಿ ನಿಪುಣನಾಗಿದ್ದು, ಹಲವು ಬಾರಿ ಪೊಲೀಸರ ಕಣ್ತಪ್ಪಿಸಿ ಕಾಲ್ಕಿತ್ತಿದ್ದ.

Advertisement

Udayavani is now on Telegram. Click here to join our channel and stay updated with the latest news.

Next