ಹೊಸದಿಲ್ಲಿ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಜಗತ್ತಿನಲ್ಲಿ ಉಗ್ರ ಕೃತ್ಯಗಳಿಗೆ ವಿತ್ತೀಯ ನೆರವು ನೀಡುವುದರ ಮೇಲೆ ನಿಗಾ ಇರಿಸುವ ಕಾರ್ಯಪಡೆ – ಎಫ್ಎಟಿಎಫ್ ಸಭೆ ರವಿವಾರ ಆರಂಭವಾಗಿದ್ದು, ಫೆ. 20ರ ವರೆಗೆ ನಡೆಯಲಿದೆ.
ಈ ಸಂದರ್ಭದಲ್ಲಿ 2008ರ ಮುಂಬಯಿ ದಾಳಿ ರೂವಾರಿ, ಉಗ್ರ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ತನ್ನ ನೆಲದಲ್ಲಿ ಇಲ್ಲವೆಂದು ಪಾಕಿಸ್ತಾನ ಹೇಳಿಕೊಳ್ಳುವ ಸಾಧ್ಯತೆಯೇ ಅಧಿಕವಾಗಿದೆ. ಆದರೆ ಇಸ್ಲಾಮಾಬಾದ್ ಹೇಳುವ ಸುಳ್ಳನ್ನು ಬಯಲಿಗೆ ಎಳೆಯುವ ನಿಟ್ಟಿನಲ್ಲಿ ಸಯೀದ್ ಪಾಕಿಸ್ಥಾನದ ಯಾವ ಭಾಗದಲ್ಲಿ ಅಡಗಿದ್ದಾನೆ ಎಂಬುದರ ಬಗ್ಗೆ ಕೇಂದ್ರ ಸರಕಾರ ಈಗಾಗಲೇ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿಕೊಂಡಿದ್ದು, ಅದನ್ನು ಎಫ್ಎಟಿಎಫ್ ಸಭೆಯಲ್ಲಿ ಮಂಡಿಸಲಿದೆ. ಈ ಮೂಲಕ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಯತ್ನ ಬಿರುಸುಗೊಳಿಸಿದೆ.
ಈ ಸಭೆಗೆ ಮುಂಚಿತವಾಗಿಯೇ ಹಫೀಜ್‌ನನ್ನು 2 ಪ್ರತ್ಯೇಕ ಪ್ರಕರಣಗಳಲ್ಲಿ 11 ವರ್ಷ ಜೈಲುಶಿಕ್ಷೆಯ ತೀರ್ಪು ಕೋರ್ಟ್‌ನಿಂದ ಪ್ರಕಟವಾಗುವಂತೆ ಪಾಕ್ ಮಾಡಿತ್ತು. ಈ ಮೂಲಕ ಜಗತ್ತಿಗೆ ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಂದೇಶ ರವಾನೆ ಮಾಡಲು ಮುಂದಾಗಿತ್ತು.
ಮೂಲಗಳ ಪ್ರಕಾರ, ಉಗ್ರ ಮಸೂದ್ ಅಜರ್ ಮತ್ತು ಆತನ ಕುಟುಂಬ ರಾವಲ್ಪಿಂಡಿ ಸಮೀಪದ ಚಕ್ಷಾಝಾದ್ ಎಂಬಲ್ಲಿ ಅವಿತಿದೆ. ಈ ಸ್ಥಳ ಇಸ್ಲಾಮಾಬಾದ್‌ನಿಂದ 10 ಕಿಮೀ ದೂರದಲ್ಲಿದೆ. 2008ರ ಮುಂಬಯಿ ದಾಳಿ ರೂವಾರಿ, ಉಗ್ರ ಝಕೀವುರ್ ರೆಹಮಾನ್ ಲಖ್ವಿಯನ್ನೂ ಐಎಸ್‌ಐ ಬರ್ಮಾ ಟೌನ್ ಎಂಬಲ್ಲಿ ಭದ್ರವಾಗಿ ಇರಿಸಿಕೊಂಡಿದೆ.
ಈ ಉಗ್ರಾಗ್ರೇಸರರಿಬ್ಬರೂ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೊಂಡಿರುವ ಇಮ್ರಾನ್ ಖಾನ್ ನೇತೃತ್ವದ ಸರಕಾರ ಅವರ ಪತ್ತೆಗೆ ಯಾವೊಂದು ಕ್ರಮವನ್ನೂ ಕೈಗೊಂಡಿಲ್ಲ. ಕೇಂದ್ರ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿರುವ ಮತ್ತೂಂದು ಮಾಹಿತಿ ಪ್ರಕಾರ, 2019ರ ಆ.5ರ ಅನಂತರ ಉಗ್ರ ಮಸೂದ್ ಸಹೋದರ ರೌಫ್ ಅಝರ್ ಜಮ್ಮು ಮತ್ತು ಕಾಶ್ಮೀರಕ್ಕೆ 100ಕ್ಕೂ ಹೆಚ್ಚು ಮಂದಿ ಭಯೋತ್ಪಾದಕರನ್ನು ಕಳುಹಿಸಿಕೊಡಲು ಯತ್ನಿಸಿದ್ದಾನೆ.