ಜಮ್ಮು ಕಾಶ‍್ಮೀರ: ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು ಈಗಾಗಲೇ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರೊಬ್ಬರಿಗೆ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸದ್ಯ ಪುಲ್ವಾಮ ಜಿಲ್ಲೆಯ ಗೂಸು ಗ್ರಾಮದಲ್ಲಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು, ಭಾರತೀಯ ಸೇನೆ, ಮತ್ತು ಜಮ್ಮು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಆ ವೇಳೆಗೆ ಉಗ್ರರು ಫೈರಿಂಗ್ ಆರಂಭಿಸಿದ್ದರಿಂದ , ಓರ್ವನನ್ನು ಎನ್ ಕೌಂಟರ್ ಮೂಲಕ ಹೊಡೆದುರುಳಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಇನ್ನು ಹಲವು ಉಗ್ರರು ಅಡಗಿರುವ ಸಾಧ್ಯತೆಯಿದ್ದು, ಸ್ಥಳವನ್ನು ಭದ್ರತಾಪಡೆಗಳು ಸುತ್ತುವರೆದಿವೆ. ಕಳೆದ ಒಂದು ತಿಂಗಳಿನಿಂದ ಸುಮಾರು 48 ಉಗ್ರರನ್ನು ಸೇನಾಪಡೆಗಳು ಸದೆಬಡಿದಿವೆ. ಈ ವರ್ಷಾರಂಭದಿಂದ ಸುಮಾರು 100ಕ್ಕಿಂತ ಹೆಚ್ಚು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.