Advertisement

ಹೈಕೋರ್ಟ್‌ ಮೇಲೆ ಉಗ್ರರ ಕರಿ ನೆರಳು?

12:45 AM Sep 22, 2019 | Team Udayavani |

ಬೆಂಗಳೂರು: ಹೈಕೋರ್ಟ್‌ ಕಟ್ಟಡ ಸ್ಫೋಟ ಮಾಡುವುದಾಗಿ ದೆಹಲಿ ಮೂಲದ ವ್ಯಕ್ತಿಯೋರ್ವನಿಂದ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದು ಆತಂಕ ಸೃಷ್ಟಿಸಿದೆ. ದೆಹಲಿ ಮೂಲದ ಹದರ್ಶನ ಸಿಂಗ್‌ ನಾಗಪಾಲ್‌ ಎಂಬಾತ, ಕೆಲ ದಿನಗಳ ಹಿಂದೆ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದು ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಸೆ.18ರಂದು ಕೇಸು ದಾಖಲಿಸಿಕೊಂಡಿರುವ ವಿಧಾನಸೌಧ ಪೊಲೀಸರು, ಸಬ್‌ಇನ್ಸ್‌ಪೆಕ್ಟರ್‌ ನೇತೃತ್ವದ ತಂಡವನ್ನು ದೆಹಲಿಗೆ ಕಳುಹಿಸಿದ್ದಾರೆ.

Advertisement

ದೆಹಲಿ ಮೋತಿನಗರ ನಿವಾಸಿ ಹದರ್ಶನ್‌ ಸಿಂಗ್‌ ನಾಗಪಾಲ್‌ ಕೆಲ ದಿನಗಳ ಹಿಂದೆ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದು, “ತಾನು ಇಂಟರ್‌ನ್ಯಾಷನಲ್‌ ಖಲಿಸ್ತಾನ ಬೆಂಬಲಿಗ ಗ್ರೂಪ್‌’ ಸದಸ್ಯನಾಗಿದ್ದು, ಇದೇ ಸೆ.30ರಂದು ತನ್ನ ಮಗನೊಂದಿಗೆ ಸೇರಿ ಹೈಕೋರ್ಟ್‌ ಕಟ್ಟಡದ ಹಲವು ಕಡೆ ಬಾಂಬ್‌ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಭದ್ರತಾ ವಿಭಾಗದ ಎನ್‌.ಕುಮಾರ್‌ ವಿಧಾನಸೌಧ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ದೆಹಲಿಗೆ ತೆರಳಿದ ತಂಡ: ಆರೋಪಿ ತನ್ನ ಪತ್ರದಲ್ಲಿ ವಿಳಾಸ ಉಲ್ಲೇಖೀಸಿದ್ದು, ಪಶ್ಚಿಮ ದೆಹಲಿ ಮೋತಿನಗರದಲ್ಲಿ ವಾಸವಾಗಿದ್ದೇನೆ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಶನಿವಾರವೇ ವಿಧಾನಸೌಧ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ನೇತೃತ್ವದ ತಂಡ ದೆಹಲಿಗೆ ತೆರಳಿ ಅಪರಿಚಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಹದರ್ಶನ್‌ ಸಿಂಗ್‌ ನಾಗಪಾಲ್‌ ಎಂಬವರು ಮನೆಯಲ್ಲೇ ಆಹಾರ ಪದಾರ್ಥ ತಯಾರು ಮಾಡಿ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ.

ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಅಪರಿಚಿತ ಪತ್ರ ಬರೆದಿರುವುದು ಗೊತ್ತಾಗಿದೆ. ಅಲ್ಲದೆ, ಹಳೇ ದ್ವೇಷದ ಹಿನ್ನೆಲೆಯಲ್ಲಿ ನಾಗಪಾಲ್‌ ವಿರುದ್ಧ ಷಡ್ಯಂತ್ರ ರೂಪಿಸಿರುವವನ ಬಗ್ಗೆ ಕೆಲ ಮಾಹಿತಿ ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುವುದು. ಈ ಸಂಬಂಧ ಹೈಕೋರ್ಟ್‌ನಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಹೈಕೋರ್ಟ್‌ ಆವರಣ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ತಪಾಸಣೆ ನಡೆಸಲಾಗುತ್ತಿದೆ. ಎಲ್ಲಾ ದ್ವಾರಗಳಲ್ಲಿಯೂ ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ನಕಲಿ ಪತ್ರ: ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌, “ಪ್ರಾಥಮಿಕ ತನಿಖೆಯಲ್ಲಿ ಹದರ್ಶನ್‌ ಸಿಂಗ್‌ ನಾಗಪಾಲ್‌ ಹೆಸರಿನಲ್ಲಿ ಬಂದಿರುವ ನಕಲಿ ಪತ್ರ ಎಂಬುದು ಗೊತ್ತಾಗಿದೆ. ಪತ್ರ ಬರೆದಿರುವ ವ್ಯಕ್ತಿ ಬಂಧನಕ್ಕೆ ವಿಶೇಷ ತಂಡವನ್ನು ದೆಹಲಿಗೆ ಕಳುಹಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನ ಮೂಲದ ಜೈಷ್‌-ಇ-ಮೊಹಮ್ಮದ್‌ ಸಂಘಟನೆಯಿಂದ ಛತ್ತೀಸ್‌ಘಡದ ರೈಲ್ವೆ ನಿಲ್ದಾಣದ ಈ-ಮೇಲ್‌ಗೆ ಬೆಂಗಳೂರು ಸೇರಿ ದೇಶದ ಹಲವು ರೈಲು ನಿಲ್ದಾಣಗಳನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಬಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next