Advertisement

ಹಿಂದೂ ಸಂಘಟನೆಗಳಿಂದ ಭಯೋತ್ಪಾದಕ ಚಟುವಟಿಕೆ: ಮಟ್ಟು

12:45 PM Jan 31, 2018 | |

ಮಂಗಳೂರು: ನಾಥೂರಾಮ್‌ ಗೋಡ್ಸೆಯ ಬೂದಿಯನ್ನು ಇಟ್ಟು ಇಂದಿಗೂ ಪೂಜೆ ಮಾಡಲಾಗುತ್ತದೆ. ಅದೇ ಮೂಲದಿಂದ ಹುಟ್ಟಿದ ಹಿಂದೂ ಸಂಘಟನೆಗಳು ಬೇರೆ ಬೇರೆ ರೀತಿಯ ಭಯೋತ್ಪಾದಕ ಕೆಲಸಗಳಲ್ಲಿ ನಿರತವಾಗಿವೆ. ಗೋಡ್ಸೆಗೆ ಗುಡಿ ಕಟ್ಟಲು ಹೊರಟಿದ್ದಾರೆ. ಆದರೆ ಗಾಂಧೀಜಿಗೆ ಚಪ್ಪಲಿ ಹಾರ ಹಾಕಿದ್ದರೂ ಪ್ರತಿಭಟನೆ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಹೇಳಿದ್ದಾರೆ.

Advertisement

ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಮಾನವ ಸರಪಳಿ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಗೌರಿ ಲಂಕೇಶ್‌ ಸಾವನ್ನು ಲಕ್ಷಾಂತರ ಮಂದಿ ಸಂಭ್ರಮಿಸುತ್ತಾರೆ. ಇದು ನಾವು ತಲುಪಿರುವ ಅಧೋಗತಿಗೆ ಉದಾಹರಣೆ. ಚುನಾವಣೆಯಲ್ಲಿ ಅಬಿವೃದ್ಧಿ, ಭ್ರಷ್ಟಾಚಾರ ವಿಷಯದ ಚರ್ಚೆಯಾಗಬೇಕೇ ಹೊರತು, ದೇವರನ್ನು ಚುನಾವಣೆಯ ಪೋಸ್ಟರನ್ನಾಗಿ ಮಾಡಬಾರದು ಎಂದರು.

ಕಲ್ಲಡ್ಕ ಪ್ರಭಾಕರ ಭಟ್ಟರಿಂದ ನಾರಾಯಣ ಗುರುಗಳಿಗೆ ಅವಮಾನ ಆರ್‌ಎಸ್‌ಎಸ್‌ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರು ಜನಾರ್ದನ ಪೂಜಾರಿ ಅವರ ಆತ್ಮಕತೆ ಬಿಡುಗಡೆ ಸಮಾರಂಭಕ್ಕೆ ಕುದ್ರೋಳಿಗೆ ಆಗಮಿಸಿದ್ದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಮಾಡಿದ ಅವಮಾನವಾಗಿದೆ ಎಂದು ಮಟ್ಟು ಹೇಳಿದ್ದಾರೆ.

ಯಾರು ನಮ್ಮ ಶತ್ರುಗಳು, ಯಾರು ನಮ್ಮ ಮಿತ್ರರು ಎನ್ನುವುದನ್ನು ಗುರುತಿಸುವ ಶಕ್ತಿ ನಮ್ಮಲ್ಲಿರಬೇಕು. ಇದು ಯುದ್ಧದ ಕಾಲವೇ ಹೊರತು ಶಾಂತಿಯ ಕಾಲವಲ್ಲ. ಸಮಾನ ಮನಸ್ಕ ರೆಲ್ಲರೂ ಜತೆಗೂಡಬೇಕು. ಆದರೆ ಯಾರನ್ನು ದೂರ ಇಡಬೇಕೋ ಅದನ್ನು ಯೋಚನೆ ಮಾಡ ಬೇಕಿದೆ. ಸ್ವಾರ್ಥಕ್ಕಾಗಿ ರಾಜಕೀಯ ಉದ್ದೇಶಕ್ಕಾಗಿ ಸೈದ್ಧಾಂತಿಕ ರಾಜಿ ಮಾಡಬಾರದು. ಆಗ ಮಾತ್ರ ಸೌಹಾರ್ದ ಪರಂಪರೆಯನ್ನು ಗಟ್ಟಿ ನೆಲದಲ್ಲಿ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದರು.

ಮನುಷ್ಯ ವಿರೋಧಿಗಳಿದ್ದಾರೆ
20 ವರ್ಷಗಳ ಹಿಂದೆ ನಾನು ದಕ್ಷಿಣ ಕನ್ನಡದವ ಎಂದು ಎದೆ ತಟ್ಟಿ ಹೇಳುತ್ತಿದ್ದೆ. ಈ ಜಿಲ್ಲೆಯವರು ಉದ್ಯಮಶೀಲರು, ಮಹತ್ವಾಕಾಂಕ್ಷಿಗಳು, ಸಾಹಸಿ ಗಳು ಎಂಬ ಅಭಿಪ್ರಾಯ ಸಮಾಜದಲ್ಲಿತ್ತು. ಆದರೆ ಇಂದು ಚಿತ್ರಣ ಬದಲಾಗಿದೆ. ದ.ಕ.ದಲ್ಲಿ ಕೋಮುವಾದಿಗಳಿದ್ದಾರೆ, ಮನುಷ್ಯ ವಿರೋಧಿಗಳಿದ್ದಾರೆ ಎಂದು ಸ್ವತಃ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕೂಡ ಹೇಳಿದ್ದಾರೆ ಎಂದು ತಿಳಿಸಿದರು.

Advertisement

ದ.ಕ. ಬಹು ಸಂಸ್ಕೃತಿಯ ತೊಟ್ಟಿಲು. ಆದರೆ ಇದನ್ನು ಇಂದು ಒಡೆದು ಹಾಕಲಾಗುತ್ತಿದೆ. ಮತ್ತೆ ಕಟ್ಟುವ ಕೆಲಸದಲ್ಲಿ ನಾವು ತೊಡಗಬೇಕು. ಕಳೆದ 25 ವರ್ಷಗಳಿಂದ ಕೋಮುವಾದದ ಜ್ವಾಲೆಯಲ್ಲಿ ದಹಿಸುತ್ತಾ ಇದ್ದೇವೆ. ಗಾಂಧೀಜಿ ಅವರು ಸಮಾನತೆ, ಏಕತೆ, ಅಸ್ಪೃಶ್ಯತೆಯ ಬಗ್ಗೆ ಹೋರಾಟ ನಡೆಸಿದ್ದರು. ಗಾಂಧೀಜಿಯ ಈ ಕನಸುಗಳು ಇಂದಿಗೂ ಈಡೇರಿಲ್ಲ ಎಂದರು.

ವೇದಿಕೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಮೇಯರ್‌ ಕವಿತಾ ಸನಿಲ್‌, ವಂ| ವಾಲಿನ್‌ ಡಿ’ಸೋಜಾ, ವಂ| ಜಾನಿಯಲ್‌ ಡಿ’ಸೋಜಾ, ಮಾಜಿ ಮೇಯರ್‌ ಅಶ್ರಫ್‌, ಕಾರ್ಮಿಕ ಮುಂದಾಳು ಸಿಯಾನ್‌, ವಾಸುದೇವ ಬೋಳೂರು, ದೇವದಾಸ್‌, ದಿನೇಶ್‌ ಹೆಗ್ಡೆ, ಚಂದ್ರಕಲಾ ನಂದಾವರ ಮುಂತಾದವರು ಉಪಸ್ಥಿತರಿದ್ದರು.

ಕಲ್ಲಡ್ಕ ಭಟ್‌ ಪ್ರಧಾನಿಯಾ? ರಾಷ್ಟ್ರಪತಿಯಾ?
ಕಲ್ಲಡ್ಕ ಪ್ರಭಾಕರ ಭಟ್‌ ಯಾರು ಎಂದು ತಿಳಿಯಲು ಇತಿಹಾಸವನ್ನು ಓದಬೇಕಾಗಿಲ್ಲ. ಇತ್ತೀಚಿನ ಅವರ ಕೆಲ ಭಾಷಣಗಳನ್ನು ಕೇಳಿದರೆ ಸಾಕು. ಕಾಂಗ್ರೆಸ್‌ ನಾಯಕರಲ್ಲಿ ಅನೇಕರು ಇಂದು ಕಲ್ಲಡ್ಕ ಪ್ರಭಾಕರ್‌ ಭಟ್‌ ಹೆಸರು ಹೇಳಲು ಹೆದರುತ್ತಾರೆ. ಅವರ್ಯಾರು ಪ್ರಧಾನಿಯಾ ? ರಾಷ್ಟ್ರಪತಿಯಾ ? ಅವರಿಗೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಕೊಲೆಯ ವಿಚಾರದಲ್ಲಿ ಜೈಲಿಗೆ ಹೋದವರ ಬಗ್ಗೆ ದ್ವೇಷವಿಲ್ಲ. ಅವರು ಕೇವಲ ಕೈಗಳು ಮಾತ್ರ. ಆ ಕೈಗಳನ್ನು ಆಡಿಸುವ ಮೆದುಳು ಬೇರೆ ಕಡೆ ಇದೆ ಎಂದು ದಿನೇಶ್‌ ಅಮೀನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next