Advertisement

ದೇಶಕ್ಕೆ ಉಗ್ರರ ಪ್ರವೇಶ?

09:13 AM Aug 22, 2019 | mahesh |

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ)ಯ ಏಜೆಂಟ್‌ನೊಂದಿಗೆ ಸೇರಿ ನಾಲ್ವರು ಭಯೋತ್ಪಾದಕರು ಭಾರತದೊಳಕ್ಕೆ ನುಸುಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಮಂಗಳವಾರ ಹೈಅಲರ್ಟ್‌ ಘೋಷಿಸಲಾಗಿದೆ. ಕಳೆದ ವಾರವಷ್ಟೇ ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಅಲರ್ಟ್‌ ಘೋಷಿಸಲಾಗಿತ್ತು.

Advertisement

ರಾಜಸ್ಥಾನಕ್ಕೆ ನುಗ್ಗಿದ್ದಾರೆ ಎನ್ನಲಾಗಿರುವ ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡಿಸಲಾಗಿದ್ದು, ಅದನ್ನು ಎಲ್ಲ ಜಿಲ್ಲಾ ಎಸ್‌ಪಿಗಳಿಗೆ ರವಾನಿಸಿ, ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಆಫ‌್ಗನ್‌ನ ಪಾಸ್‌ಪೋರ್ಟ್‌ ಮೂಲಕ ನಾಲ್ವರು ರಾಜ್ಯ ಪ್ರವೇಶಿಸಿದ ಬಗ್ಗೆ ಮಾಹಿತಿಯಿದೆ. ಹೀಗಾಗಿ, ಎಲ್ಲ ಹೋಟೆಲ್ಗಳು, ಢಾಬಾಗಳು, ರೈಲು ನಿಲ್ದಾಣ, ಬಸ್‌ ನಿಲ್ದಾಣಗಳು ಸೇರಿದಂತೆ ಎಲ್ಲ ಕಡೆಯೂ ಶೋಧ ಕಾರ್ಯ ನಡೆಸಲಾಗುತ್ತಿದೆ. ಜತೆಗೆ, ಅನುಮಾನಾಸ್ಪದ ವಾಹನಗಳ ಮೇಲೂ ನಿಗಾ ಇಡುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

8 ಜಿಲ್ಲೆಗಳಿಗೆ ಅಲರ್ಟ್‌: ಮಧ್ಯಪ್ರದೇಶದ 8 ಜಿಲ್ಲೆಗಳಲ್ಲಿ ಅಲರ್ಟ್‌ ಘೋಷಿಸಲಾಗಿದೆ. ಗುಜರಾತ್‌ ಮತ್ತು ರಾಜಸ್ಥಾನದ ಜೊತೆ ಗಡಿ ಹಂಚಿಕೊಂಡಿರುವಂಥ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಎರಡೂ ರಾಜ್ಯಗಳಿಂದ ಬರುವ ರೈಲುಗಳಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ವಾಪಸ್‌ ಪಡೆದ ಬಳಿಕ ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕ್‌ ಮೂಲದ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಈ ಹಿಂದೆಯೇ ಎಚ್ಚರಿಸಿದೆ.

ಮಕ್ಕಳು ಚಕ್ಕರ್‌, ನೌಕರರು ಹಾಜರ್‌: ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಲೆಗಳು ಸೋಮವಾರವೇ ಆರಂಭವಾದರೂ, ಪ್ರಾಥಮಿಕ ಶಾಲೆಗಳಿಗೆ ಮಂಗಳವಾರವೂ ಮಕ್ಕಳು ಬಂದಿಲ್ಲ. ಆದರೆ, ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿಯಲ್ಲಿ ಸುಧಾರಣೆಯಾಗಿದೆ. ಶ್ರೀನಗರದ ಲಾಲ್ಚೌಕ್‌ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ ಅನ್ನು 15 ದಿನಗಳ ನಂತರ ತೆರವುಗೊಳಿಸಲಾಗಿದ್ದು, ವಾಹನಗಳ ಸಂಚಾರ ಸುಗುಮಗೊಳಿಸಲಾಗಿದೆ.

Advertisement

ಖಾನ್‌ಗೆ ಟ್ರಂಪ್‌ ಕರೆ: ಕಾಶ್ಮೀರ ವಿಚಾರ ಸಂಬಂಧ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಟ್ರಂಪ್‌ ಜತೆ ದೂರವಾಣಿ ಸಂಭಾಷಣೆ ನಡೆಸಿದ ಬೆನ್ನಲ್ಲೇ ಟ್ರಂಪ್‌ ಅವರು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೂ ಕರೆ ಮಾಡಿದ್ದಾರೆ. ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳದಂತೆ ಕ್ರಮ ಕೈಗೊಳ್ಳಿ ಎಂದು ಅವರು ಖಾನ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನ ದಾಳಿ: ಯೋಧ ಹುತಾತ್ಮ
ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಎಲ್ಒಸಿಯಲ್ಲಿ ಪಾಕಿಸ್ತಾನ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಮಂಗಳವಾರ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜತೆಗೆ ನಾಲ್ವರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದ್ದು, ಪಾಕ್‌ನಲ್ಲೂ ಸಾವು-ನೋವು ಉಂಟಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next