ಹೊಸದಿಲ್ಲಿ: “ಮಾತುಕತೆ ಮತ್ತು ಉಗ್ರವಾದ ಜತೆಯಾಗಿ ಹೋಗಲು ಸಾಧ್ಯವೇ ಇಲ್ಲ. ಆದರೆ ಉಗ್ರವಾದದ ಬಗ್ಗೆ ಮಾತುಕತೆ ನಡೆಸಲು ಸಾಧ್ಯ’ ಎಂಬ ವಿಚಾರವನ್ನು ನೆರೆಯ ರಾಷ್ಟ್ರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್, ಡಿ. 26ರಂದು ಬ್ಯಾಂಕಾಕ್‌ನಲ್ಲಿ ಭಾರತ ಮತ್ತು ಪಾಕಿಸ್ಥಾನದ ಎನ್‌ಎಸ್‌ಎ ಅಧಿಕಾರಿಗಳು ಮಾತುಕತೆ ನಡೆಸಿದ್ದುದನ್ನು ಸ್ಪಷ್ಟಪಡಿಸಿದ್ದಾರೆ. ಭಾರತದ ಅಜಿತ್ ಧೋವಲ್ ಮತ್ತು ಪಾಕಿಸ್ಥಾನದ ಕರ್ನಲ್ ನಾಸಿರ್ ಖಾನ್ ಜಾನುjವಾ ಭೇಟಿಯಾಗಿದ್ದರು ಎಂದು ಹೇಳಿರುವ ಅವರು, “ಗಡಿ ಯಾಚೆಗಿನ ಭಯೋತ್ಪಾದನೆ ನಿಗ್ರಹ’ ವಿಚಾರವೇ ಮಾತುಕತೆಯ ಕೇಂದ್ರಬಿಂದು ಆಗಿತ್ತು ಎಂದಿದ್ದಾರೆ.
ನಾಸಿರ್ ಜತೆಗಿನ ಮಾತುಕತೆ ವೇಳೆ ಗಡಿಯಾಚೆಗಿನ ಭಯೋತ್ಪಾದನೆ ವಿಚಾರವನ್ನು ಧೋವಲ್ ಪ್ರಮುಖವಾಗಿ ಪ್ರಸ್ತಾವಿಸಿದರಲ್ಲದೆ, ಉಗ್ರರ ದಮನಕ್ಕಾಗಿ ಎರಡೂ ರಾಷ್ಟ್ರಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಉಪಖಂಡದಲ್ಲಿ ಉಗ್ರವಾದವನ್ನು ಬುಡಸಹಿತ ಕಿತ್ತು ಹಾಕುವ ಬಗ್ಗೆ ಭಾರತ ಪಣತೊಟ್ಟಿದೆ ಎಂದೂ ತಿಳಿಸಿದ್ದಾರೆಂದು ರವೀಶ್ ವಿವರಿಸಿದರು.
ಇದಲ್ಲದೆ, “ಶಾಂತಿ ಮಾತುಕತೆ, ಭಯೋತ್ಪಾದನೆ ಒಟ್ಟಿಗೆ ಸಾಗುವುದಿಲ್ಲ ಎಂಬುದನ್ನು ಭಾರತ, ಪಾಕ್‌ಗೆ ಮತ್ತೂಮ್ಮೆ ಮನವರಿಕೆ ಮಾಡಿತು’ ಎಂದ ಅವರು, ಮುಂಬರುವ ದಿನಗಳಲ್ಲಿ ಎರಡೂ ರಾಷ್ಟ್ರಗಳ ಡಿಜಿಎಂಒ ಮಟ್ಟದ ಹಾಗೂ ಸೇನಾಧಿಕಾರಿಗಳ ನಡುವಿನ ಮಾತುಕತೆಗಳನ್ನೂ ನಡೆಸಲಾಗುತ್ತದೆ ಎಂದರು.
ಕುತೂಹಲದ ವಿಚಾರವೆಂದರೆ, ಡಿ. 25ರಂದು ಪಾಕ್ ಜೈಲಿನಲ್ಲಿ ಬಂದಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್ ಅವರಿಗೆ ತನ್ನ ತಾಯಿ, ಪತ್ನಿಯನ್ನು ಭೇಟಿ ಮಾಡುವ ಅವಕಾಶ ನೀಡಲಾಗಿತ್ತು. ಇದಾದ ಮರುದಿನವೇ ಧೋವಲ್, ನಾಸಿರ್ ಭೇಟಿ ನಡೆದಿದೆ. ಈ ಭೇಟಿಯ ವೇಳೆ ಜಾಧವ್ ಅವರನ್ನು ಭೇಟಿಯಾಗಲು ಬಂದಿದ್ದ ಆತನ ತಾಯಿ, ಪತ್ನಿಯೊಂದಿಗೆ ಪಾಕಿಸ್ಥಾನದ ಅಧಿಕಾರಿಗಳು ನಡೆದುಕೊಂಡ ಕಠೊರ ನಡೆಗಳ ಬಗ್ಗೆ ಯಾವುದೇ ಪ್ರಸ್ತಾವವಾಗಿಲ್ಲ ಎಂದು ಹೇಳಿದರು.