Advertisement

ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲರೂ ಒಂದಾಗಬೇಕು

06:00 AM Dec 02, 2018 | Team Udayavani |

ಬೆಂಗಳೂರು: ಭಯೋತ್ಪಾದನೆ ಹಾಗೂ ಹವಾಮಾನ ಬದಲಾವಣೆ ಜಾಗತಿಕ ಸವಾಲುಗಳಾಗಿ ಪರಿಣಮಿಸಿವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

Advertisement

ನೇಪಾಳದ ಕಠ್ಮಂಡುವಿನಲ್ಲಿ ಶನಿವಾರ ಆಯೋಜಿಸಿದ್ದ ಏಷ್ಯಾ-ಪೆಸಿಫಿಕ್‌ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಯೋತ್ಪಾದನೆ ಯಾವುದೇ ನಿರ್ದಿಷ್ಟ ಗಡಿ, ಧರ್ಮ , ಲಿಂಗಕ್ಕೆ ಸೀಮಿತವಾಗಿಲ್ಲ. ಭಯೋತ್ಪಾದನೆ ಮೆಟ್ಟಿ ನಿಲ್ಲಲು ಎಲ್ಲ ದೇಶಗಳು ಒಂದಾಗಬೇಕು ಎಂದು ಹೇಳಿದರು.

ಭಯೋತ್ಪಾದಕರ ಸಣ್ಣ ಗುಂಪು ಸಾಕಷ್ಟು ಅಪಾಯ ತಂದೊಡ್ಡಬಲ್ಲದು. ರಾಜ್ಯ ಅಥವಾ ಪ್ರಾಂತ್ಯ ಪ್ರೇರಿತ ಭಯೋತ್ಪಾದನೆಯಿಂದ ಭಾರತ ಸೇರಿದಂತೆ ಹಲವು ದೇಶಗಳು ತೊಂದರೆಗೊಳಗಾಗಿವೆ.  ಜಾಗತಿಕ ಮಟ್ಟದ ಪ್ರಯತ್ನವಾದಾಗ ಮಾತ್ರ ಭಯೋತ್ಪಾದನೆ ನಿಗ್ರಹ ಸಾಧ್ಯ ಎಂದು ಪ್ರತಿಪಾದಿಸಿದರು.

1996 ರಲ್ಲಿ ಭಾರತವು ಕಾಂಪ್ರಹೆನ್ಸಿàವ್‌ ಕನ್‌ವೆನ್‌ಷನ್‌ ಆನ್‌ ಇಂಟರ್‌ನ್ಯಾಷನಲ್‌ ಟೆರರಿಸಮ್‌ ಎಂಬ ಕರಡು ಸಿದ್ಧಪಡಿಸಿ ಸಂಯುಕ್ತ ರಾಷ್ಟ್ರಗಳಿಗೆ ಸಲ್ಲಿಸಿದೆ. ಆದರೆ, ಅದು ಇನ್ನೂ ಕರಡು ರೂಪದಲ್ಲೇ ಇದೆ ಎಂದರು.

ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೊಳಗಾಗಿವೆ. ಏಕೆಂದರೆ ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲದಿರುವುದು ಪ್ರಮುಖ ಕೊರತೆಯಾಗಿದೆ ಎಂದು ಹೇಳಿದರು.

Advertisement

ಹವಾಮಾನ ಬದಲಾವಣೆಯಿಂದಾಗುವ ಪ್ರತಿಕೂಲ ಪರಿಣಾಮ ತಡೆಗಟ್ಟಲು ಅದರಿಂದ ಬಾಧಿತರಾಗಿರುವ ರಾಷ್ಟ್ರಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವು ಕಲ್ಪಿಸುವ ಅಗತ್ಯವಿದೆ. ಭಯೋತ್ಪಾದನೆ ನಿಗ್ರಹ ಹಾಗೂ ಹವಾಮಾನ ಬದಲಾವಣೆ ಸವಾಲು ಎದುರಿಸಲು ಭಾರತ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ತಿಳಿಸಿದರು.

ರೈತಾಪಿ ಸಮುದಾಯದಿಂದ ಬಂದ ನನಗೆ ಆಹಾರ ಭದ್ರತೆ, ಪೌಷ್ಠಿಕಾಂಶ ಹಾಗೂ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಒಲವು ಜಾಸ್ತಿ. ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಂದು ದೇಶವು ಇದರ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಿದೆ ಎಂದು ತಿಳಿಸಿದರು. ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸೇರಿದಂತೆ ಹಲವು ಗಣ್ಯರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next