ನವದೆಹಲಿ:ಎಲ್ಲಾ ವಿಧದ ಭಯೋತ್ಪಾದನೆ ವಿರುದ್ಧ ಸಂಘಟಿತರಾಗಿ ಹೋರಾಡಬೇಕಾದ ಅಗತ್ಯವಿದೆ. ಅಲ್ಲದೇ ಉಗ್ರವಾದ ಬೆಂಬಲಿಸುವ ದೇಶಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಸೌದಿ ಅರೇಬಿಯಾದ ಭಾವೀ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಭಾರತ ಪ್ರವಾಸ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ನವದೆಹಲಿಗೆ ಆಗಮಿಸಿದ್ದರು. ಬುಧವಾರ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಪೈಶಾಚಿಕ ದಾಳಿ ಭಯೋತ್ಪಾದನೆಯ ಕರಾಳ ಮುಖದ ಮತ್ತೊಂದು ಕಪ್ಪು ಚುಕ್ಕೆಯಾಗಿದೆ ಎಂದರು. ಆ ಹಿನ್ನೆಲೆಯಲ್ಲಿ ಉಗ್ರವಾದವನ್ನು ಮಟ್ಟ ಹಾಕಲು ನಾವು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿದ್ದೇವೆ ಎಂದು ವಿವರಿಸಿದರು.
ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶಗೊಳಿಸಿ, ಉಗ್ರವಾದವನ್ನು ಬೆಂಬಲಿಸುವುದನ್ನು ಕೊನೆಗೊಳಿಸಿ, ಹುತಾತ್ಮರಾದ ಯೋಧರಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಮೋದಿ ಹೇಳಿದರು.
ಮೂಲಭೂತವಾದ ಮತ್ತು ಭಯೋತ್ಪಾದನೆ ನಮ್ಮ ಸಮಾನ ಶತ್ರುವಾಗಿದೆ. ಆ ನಿಟ್ಟಿನಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಲು ನಾವು ಭಾರತಕ್ಕೆ ಎಲ್ಲಾ ರೀತಿಯಿಂದಲೂ ಬೆಂಬಲ ನೀಡುತ್ತೇವೆ. ಅಷ್ಟೇ ಅಲ್ಲ ಹೊಸ ಪೀಳಿಗೆಯ ಭವಿಷ್ಯ ಉಜ್ವಲವಾಗಿರುವ ನೆಲೆಯಲ್ಲಿ ನಾವು ಎಲ್ಲಾ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸೌದಿ ಯುವರಾಜ ಅಭಿಪ್ರಾಯವ್ಯಕ್ತಪಡಿಸಿದರು.
ಭಾರತಕ್ಕೆ ಗುಪ್ತಚರ, ರಾಜಕೀಯ ಸಹಕಾರ ನೀಡಲು ಸೌದಿ ಅರೇಬಿಯಾ ಸಿದ್ಧವಾಗಿದೆ. ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಸಾವಿರಾರು ವರ್ಷಗಳ ಬಾಂಧವ್ಯವಿದೆ ಎಂದು ಸೌದಿ ಯುವರಾಜ ಸಲ್ಮಾನ್ ಇಂದು ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.