Advertisement

ಆರ್‌ಎಸ್‌ಎಸ್‌ ನಾಯಕನ ಗುಂಡಿಕ್ಕಿ ಹತ್ಯೆಗೈದ ಉಗ್ರರು

02:15 AM Apr 10, 2019 | sudhir |

ಜಮ್ಮು: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಆರೆಸ್ಸೆಸ್‌ ನಾಯಕ ಚಂದ್ರಕಾಂತ್‌ ಶರ್ಮಾ ಮತ್ತು ಅವರ ಭದ್ರತಾ ಸಿಬಂದಿಯನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದ ಘಟನೆ ಮಂಗಳವಾರ ಸಂಭವಿಸಿದೆ. ಘಟನೆ ಬೆನ್ನಲ್ಲೇ ಕೋಮು ಸೂಕ್ಷ್ಮ ಪ್ರದೇಶವಾದ ಜಮ್ಮುವಿನಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಿಶ್ತ್ವಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಜತೆಗೆ ಇಂಟರ್ನೆಟ್‌ ಸಂಪರ್ಕವನ್ನೂ ಸ್ಥಗಿತಗೊಳಿಸಲಾಗಿದ್ದು, ಹೆಚ್ಚುವರಿ ಭದ್ರತೆಗಾಗಿ ಸೇನೆಯನ್ನು ಕರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಂಗಳವಾರ ಮಧ್ಯಾಹ್ನ 12.30ರ ವೇಳೆಗೆ ಈ ಘಟನೆ ಸಂಭವಿಸಿದೆ. ಇಲ್ಲಿನ ಆರೋಗ್ಯ ಕೇಂದ್ರದೊಳಕ್ಕೆ ನುಗ್ಗಿದ ಉಗ್ರನೊಬ್ಬ ಆರೆಸ್ಸೆಸ್‌ ನಾಯಕ ಶರ್ಮಾ (52) ಮೇಲೆ ಗುಂಡಿನ ಮಳೆಗರೆದಿದ್ದಾನೆ. ಈ ವೇಳೆ ಅವರ ಭದ್ರತಾ ಸಿಬಂದಿ ರಾಜೀಂದರ್‌ಗೆ ಗುಂಡು ತಾಗಿದ್ದು, ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಗಂಭೀರ ಗಾಯಗೊಂಡಿದ್ದ ಶರ್ಮಾ ಅವರನ್ನು ಕೂಡಲೇ ಏರ್‌ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಗುಂಡಿನ ದಾಳಿ ನಡೆಸಿದ ಉಗ್ರ, ಅನಂತರ ರಾಜೀಂದರ್‌ ಕೈಯಲ್ಲಿದ್ದ ರೈಫ‌ಲ್‌ ಅನ್ನು
ಕಸಿದುಕೊಂಡು ಪರಾರಿಯಾಗಿ ದ್ದಾನೆ. ಶರ್ಮಾ ಇಲ್ಲಿ ಫಾರ್ಮಾಸಿಸ್ಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಶರ್ಮಾ ಅವರ ಚಲನವಲನದ ಮೇಲೆ ನಿಗಾ ಇರಿಸಿಯೇ ಉಗ್ರರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸರಕಾರ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ. ಕಳೆದ ನ.1ರಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್‌ ಪರಿಹಾರ್‌ ಮತ್ತು ಅವರ ಸಹೋದರ ಅಜಿತ್‌ರನ್ನು ಇದೇ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next