ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿನ ತ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಹತನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಹಮ್ಮದ್ ಖಾನ್ ಎಂಬಾತನೆ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಹಿಜ್ಬುಲ್ ಮುಖ್ಯಸ್ಥನಾಗಿದ್ದಾನೆ. ಈತನೊಂದಿಗೆ ಅಡಗಿಕೊಂಡಿದ್ದ ಇನ್ನೊಬ್ಬ ಉಗ್ರನನ್ನೂ ಸಹ ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ.
ಕೆಲವು ಶಂಕಿತ ಉಗ್ರರು ಇಲ್ಲಿನ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಇಲ್ಲಿನ ಗುಲ್ಷನ್ ಪೊರಾ ಪ್ರದೇಶದಲ್ಲಿ ಪತ್ತೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಕಟ್ಟದ ಒಳಗಿದ್ದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು ಎಂಬ ಮಾಹಿತಿ ಲಭ್ಯವಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರೆನ್ನಲಾಗಿರುವ ಮೂವರು ಉಗ್ರರನ್ನು ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ವಶಕ್ಕೆ ಪಡೆದುಕೊಂಡ ಒಂದು ದಿನದ ಬಳಿಕ ಈ ಎನ್ ಕೌಂಟರ್ ನಡೆದಿದೆ.
ಹಿಜ್ಬುಲ್ ನಾಯಕನಾಗಿದ್ದ ಸಬ್ಜರ್ ಅಹಮ್ಮದ್ ಭಟ್ ಸಾವಿನ ನಂತರ 2017ರಲ್ಲಿ ಹಮ್ಮದ್ ಖಾನ್ ಈ ಉಗ್ರ ಸಂಘಟನೆಯ ಉನ್ನತ ನಾಯಕ ಸ್ಥಾನಕ್ಕೆ ಆಯ್ಕೆಗೊಂಡಿದ್ದ. 2017ರಲ್ಲಿ ಇದೇ ತ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಅಹಮ್ಮದ್ ಭಟ್ ನನ್ನು ಎನ್ ಕೌಂಟರ್ ನಲ್ಲಿ ಹೊಡೆದು ಹಾಕಿತ್ತು. ಈತನ ಹತ್ಯೆಗೆ ಪ್ರತೀಕಾರವಾಗಿ ಕಾಶ್ಮೀರದ ವಿವಿಧ ಭಾಗಗಳಲ್ಲಿ ನಡೆದಿದ್ದ ಹಿಂಸಾಚಾರಗಳಲ್ಲಿ ಹಲವರು ಗಾಯಗೊಂಡಿದ್ದರು.