ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಪ್ರಚೋದನೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ವರ್ಗಾವಣೆಯ ತನಿಖೆಯ ಭಾಗವಾಗಿ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಶಬೀರ್ ಅಹ್ಮದ್ ಶಾನ ಶ್ರೀನಗರದ ಮನೆಯನ್ನು ಜಾರಿ ನಿರ್ದೇಶನಾಲಯ ಶುಕ್ರವಾರ (ನವೆಂಬರ್ 04) ಜಪ್ತಿ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರೋಗಿಗಳು ತುರ್ತು ಪರಿಸ್ಥಿತಿಯಲ್ಲಿ ಯಾವುದೇ ದಾಖಲೆ ನೀಡಬೇಕಿಲ್ಲ: ಸಚಿವ ಡಾ.ಕೆ.ಸುಧಾಕರ್
ಶ್ರೀನಗರದ ಬಝ್ರುಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬೋಟ್ಶಾ ಕಾಲೋನಿಯ ಸುನಾತ್ ನಗರದಲ್ಲಿರುವ ಈ ಮನೆ 21.80 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
2017ರಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಶಬೀರ್ ಅಹ್ಮದ್ ಶಾ ವಿರುದ್ಧ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಜಮ್ಮು-ಕಾಶ್ಮೀರ ಕಣಿವೆ ಪ್ರದೇಶದಲ್ಲಿನ ಮೆರವಣಿಗೆ, ಬಂದ್, ಹರತಾಳ ಮತ್ತು ಕಲ್ಲು ತೂರಾಟ ಸೇರಿದಂತೆ ಗಲಭೆಗೆ ಕುಮ್ಮಕ್ಕು ನೀಡು ಕಾರ್ಯದಲ್ಲಿ ಶಬೀರ್ ಅಹ್ಮದ್ ಶಾ ಶಾಮೀಲಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಶಬೀರ್ ಅಹ್ಮದ್ ಶಾ ಹಿಜ್ಬುಲ್ ಮುಜಾಹಿದೀನ್ ಸೇರಿದಂತೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಂದ ಹಣಕಾಸು ಪಡೆದಿದ್ದು, ಈ ಹಣವನ್ನು ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆಗೆ ಬೆಂಬಲ ನೀಡಲು ಬಳಸಿರುವುದಾಗಿ ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.