ಕೋಲ್ಕತಾ: ನಾರದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಹೈಕೋರ್ಟ್ ನಲ್ಲಿ ಬುಧವಾರ (ಮೇ 19) ನಡೆದ ವಿಚಾರಣೆ ವೇಳೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾನೂನು ಸಚಿವ ಮೊಲೊಯ್ ಘಾಟಕ್ ಮತ್ತು ಪಕ್ಷದ ಮುಖಂಡ ಕಲ್ಯಾಣ್ ಬ್ಯಾನರ್ಜಿ ಹಾಜರಿದ್ದರು.
ಇದನ್ನೂ ಓದಿ:ಇಂತಹ ಸ್ಥಿತಿಯಲ್ಲೂ ಕೇಂದ್ರ ಕಳಪೆ ರಾಜಕೀಯ ಮಾಡುತ್ತಿದೆ : ಮನೀಶ್ ಸಿಸೋಡಿಯಾ
ಈ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುವಂತೆ ಸಿಬಿಐ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದು, ಈಗಾಗಲೇ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳು ಜೈಲಿನಲ್ಲಿದ್ದು, ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಕೇಳಿಕೊಂಡಿರುವುದಾಗಿ ವರದಿ ತಿಳಿಸಿದೆ.
ಟಿಎಂಸಿಯ ನಾಲ್ವರು ಮುಖಂಡರನ್ನು ಬಂಧಿಸಿದ್ದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಿಬಿಐ ಕಚೇರಿಗೆ ಆಗಮಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ್ದರ ಪರಿಣಾಮ ನಮಗೆ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ಸಿಬಿಐ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದೆ.
ಪಶ್ಚಿಮಬಂಗಾಳದ ಸಚಿವರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರಾ ಮತ್ತು ಸೋವನ್ ಚಟರ್ಜಿಯ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ ನಂತರ ಸೋಮವಾರ ನಾರದ ಪ್ರಕರಣದಲ್ಲಿ ನಾಲ್ವರನ್ನು ಸಿಬಿಐ ಬಂಧಿಸಿತ್ತು.
ನಾಲ್ವರು ಆರೋಪಿಗಳು ಸೋಮವಾರ ಸಿಬಿಐ ವಿಶೇಷ ಕೋರ್ಟ್ ನಿಂದ ಜಾಮೀನು ಪಡೆದಿದ್ದರು. ಆದರೆ ಸಿಬಿಐ ಇದನ್ನು ಪ್ರಶ್ನಿಸಿದ ಪರಿಣಾಮ ಹೈಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಿತ್ತು. ಹೈಕೋರ್ಟ್ ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಸಚಿವರು ಮನವಿ ಸಲ್ಲಿಸಿದ ನಂತರ ಸಿಬಿಐ ಸುಪ್ರೀಂಕೋರ್ಟ್ ನಲ್ಲಿ ಕೇವಿಯಟ್ ದಾಖಲಿಸಿದೆ.