Advertisement

ಕೋವಿಡ್‌-19: ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಉಗ್ರರು?

09:29 AM Apr 18, 2020 | sudhir |

ಬರ್ಲಿನ್‌: ಜರ್ಮನಿಯ ಪೊಲೀಸರು ಕಳೆದ ಬುಧವಾರ ಅಮೆರಿಕದ ಮಿಲಿಟರಿ ಸಂಸ್ಥಾಪನೆಗಳು ಮೇಲೆ ಬಾಂಬ್‌ ಹಾಕಲು ಸಂಚು ಮಾಡಿದ್ದ ನಾಲ್ವರು ಉಗ್ರರನ್ನು ಬಂಧಿಸಿದ್ದರು. ಇವರೆಲ್ಲ ಕಳೆದ ವರ್ಷವಷ್ಟೇ ಐಸಿಸ್‌ಗೆ ಸೇರಿದವರು ಮತ್ತು ಜರ್ಮನಿಯಲ್ಲಿ ಸುಪ್ತ ಘಟಕವನ್ನು ಸ್ಥಾಪಿಸಿ ಸಂದರ್ಭಕ್ಕಾಗಿ ಕಾಯುತ್ತಿದ್ದರು. ಇಡೀ ಜಗತ್ತು ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಸಮಯವೇ ದಾಳಿಗೆ ಸರಿಯಾದ ಸಮಯ ಎಂದು ಅವರು ಭಾವಿಸಿದ್ದರು. ಈ ಘಟನೆ ಹೇಗೆ ಭಯೋತ್ಪಾದಕರು ಮನುಕುಲವನ್ನು ಕಾಡುತ್ತಿರುವ ಒಂದು ರೋಗವನ್ನೂ ತಮ್ಮ ಸಮಯ ಸಾಧಕತನಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ನಿದರ್ಶನ.

Advertisement

ಕೋವಿಡ್‌ ಜಿಹಾದಿಗಳನ್ನೂ ಬಿಟ್ಟಿಲ್ಲ. ಆದರೆ ಅವರು ಇದನ್ನು ದೇವರೇ ಕಾಫಿರರನ್ನು ಶಿಕ್ಷಿಸಲು ಮಾಡಿದ ಉಪಾಯ ಎಂದು ಬಣ್ಣಿಸುತ್ತಿದ್ದಾರೆ. ಐಸಿಸ್‌ ಉಗ್ರ ಸಂಘಟನೆ ಕೋವಿಡ್‌ ಸಂಕಷ್ಟದ ಕಾಲದಲ್ಲೇ ಪಾಶ್ಚಾತ್ಯ ಮತ್ತು ಐರೋಪ್ಯ ದೇಶಗಳ ಮೇಲೆ ದಾಳಿ ಮಾಡುವಂತೆ ಉಗ್ರರಿಗೆ ಹೇಳಿದೆ ಎಂಬುದಾಗಿ ದ ಗಾರ್ಡಿಯನ್‌ ಉಗ್ರರ ಕೆಲವು ಸುದ್ದಿ ಮಾಧ್ಯಮಗಳನ್ನು ಉಲ್ಲೇಖಸಿ ವರದಿ ಮಾಡಿದೆ.

ಮಧ್ಯ ಪೂರ್ವ, ಏಷ್ಯಾ ಮತ್ತು ಆಫ್ರಿಕದ ದೇಶಗಳಲ್ಲಿ ಕೋವಿಡ್‌ ಹಾವಳಿಯ ಸಂದರ್ಭದಲ್ಲಿ ದಾಳಿ ನಡೆಸಲು ಜಿಹಾದಿ ಸಂಘಟನೆಗಳು ಸೂಚಿಸಿವೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕೋವಿಡ್‌ ನಿಯಂತ್ರಣದತ್ತ ಗಮನ ಹರಿಸುವಾಗ ದಾಳಿ ಸುಲಭವಾಗಬಹುದು ಎನ್ನುವುದು ಇದಕ್ಕೆ ಕಾರಣ.

ಐಸಿಸ್‌ ಆರಂಭದಲ್ಲಿ ತನ್ನ ಮುಖವಾಣಿ ಅಲ್‌ -ನಬಾದಲ್ಲಿ ಕೋವಿಡ್‌ ಆಕ್ರಮಣಕಾರಿ ದೇಶಗಳನ್ನು ಶಿಕ್ಷಿಸಲು ದೇವರು ಕಂಡುಕೊಂಡ ದಾರಿ ಎಂದು ಬಣ್ಣಿಸಿತ್ತು. ಪಾಶ್ಚಾತ್ಯ ಜಗತ್ತು ಕೋವಿಡ್‌ನಿಂದ ನಲುಗುತ್ತಿದ್ದರೂ ಜಿಹಾದಿಗಳು ತಮ್ಮ ಗುರಿಯಿಂದ ವಿಮುಖವಾಗಬಾರದು. ಇದು ಸುಸಂದರ್ಭ ಎಂದು ಭಾವಿಸಿ ಹೊಸ ದಾಳಿಗಳನ್ನು ನಡೆಸಬೇಕೆಂದು ಹೇಳಿತ್ತು. ಆದರೆ ಇತ್ತೀಚೆಗಿನ ಆವೃತ್ತಿಯಲ್ಲಿ ಮುಸ್ಲಿಮರನ್ನು ಈ ವೈರಸ್‌ ಬಾಧಿಸುವುದಿಲ್ಲ ಎನ್ನುವುದು ತಪ್ಪಾಗುತ್ತದೆ. ಎಲ್ಲರೂ ಎಚ್ಚರಿಕೆಯಿಂದಿರಬೇಕೆಂದು ಹೇಳಿಕೊಂಡಿದೆ.

ಹೆಚ್ಚಿನೆಲ್ಲ ಉಗ್ರ ಸಂಘಟನೆಗಳ ಮುಖವಾಣಿಗಳು ಅಮೆರಿಕ ಪ್ರತಿಪಾದಿಸಿದ ನಾಸ್ತಿಕವಾದವೇ ಇಂದಿನ ಸ್ಥಿತಿಗೆ ಕಾರಣ. ಜನರನ್ನು ಶಿಕ್ಷಿಸಲು ದೇವರೇ ಈ ವೈರಸ್‌ ಸೃಷ್ಟಿಸಿದ್ದಾನೆ ಎಂದು ಬರೆದಿವೆ.

Advertisement

ಮುಸ್ಲಿಮ್‌ ದೇಶಗಳಲ್ಲಿ ನೈತಿಕ ಭ್ರಷ್ಟಾಚಾರ, ಅಸಭ್ಯತೆ ಮತ್ತು ಪಾಪಗಳು ಹೆಚ್ಚಿವೆ. ಇವರನ್ನು ಶಿಕ್ಷಿಸಲು ದೇವರೇ ವೈರಸನ್ನು ಕಳುಹಿಸಿಕೊಟ್ಟಿದ್ದಾನೆ ಎಂದು ಆರು ಪುಟಗಳ ಪತ್ರವೊಂದರಲ್ಲಿ ಅಲ್‌ ಕಾಯಿದಾ ಹೇಳಿಕೊಂಡಿದೆ.

ಆಫ್ರಿಕ ಮತ್ತು ಮಧ್ಯ ಪೂರ್ವ ದೇಶಗಳ ಭ್ರಷ್ಟ, ಅಸಮರ್ಥ ಸರಕಾರಗಳಿಂದಾಗಿ ಜಿಹಾದಿ ಸಂಘಟನೆಗಳು ಅಲ್ಲಿ ತಳವೂರಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಜಿಹಾದಿ ಸಂಘಟನೆಗಳು ಜಗತ್ತಿನ ಶಕ್ತ ರಾಷ್ಟ್ರಗಳೆಂದು ಹೇಳಿಕೊಳ್ಳುತ್ತಿರುವ ಅಮೆರಿಕ, ಫ್ರಾನ್ಸ್‌, ಇಟಲಿ, ಸ್ಪೈನ್‌ ಬ್ರಿಟನ್‌, ಜರ್ಮನಿ ಕೋವಿಡ್‌ ಬಾಧೆಯಿಂದ ಅತಿ ಹೆಚ್ಚು ನಲುಗುತ್ತಿರುವುದಕ್ಕೆ ಸಂಭ್ರಮಿಸುತ್ತಿವೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next