Advertisement

ಹುತಾತ್ಮ ಯೋಧರ ಮಕ್ಕಳನ್ನು ದತ್ತು ಪಡೆದ ಬಿಹಾರ ಡಿ.ಸಿ.

11:37 AM Feb 18, 2019 | Karthik A |

ಪಟ್ನಾ: ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಲ್ಲಿ ಬಿಹಾರ ರಾಜ್ಯದ ಇಬ್ಬರು ಸಿ.ಆರ್.ಪಿ.ಎಫ್. ಯೋಧರೂ ಸೇರಿದ್ದಾರೆ. ರತನ್ ಕುಮಾರ್ ಠಾಕೂರ್ ಮತ್ತು ಸಂಜಯ್ ಕುಮಾರ್ ಸಿನ್ಹಾ ಎಂಬ ಈ ಇಬ್ಬರು ಬಿಹಾರದ ಯೋಧರು ಈ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಈ ಯೋಧರಿಬ್ಬರನ್ನು ಕಳೆದುಕೊಂಡ ಅವರ ಕುಟುಂಬ ಅನಾಥವಾಗಿದೆ.

Advertisement

ಸಂತೋಷದ ವಿಚಾರವೆಂದರೆ, ಬಿಹಾರದ ಶೇಖ್ ಪುರದ ಜಿಲ್ಲಾಧಿಕಾರಿ ಇನಾಯತ್ ಖಾನ್ ಅವರು ಈ ಇಬ್ಬರು ಹುತಾತ್ಮ ಯೋಧರ ಮಕ್ಕಳನ್ನು ದತ್ತು ಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ. ಇನಾಯತ್ ಖಾನ್ ಅವರು ಕ್ರಮವಾಗಿ ಹುತಾತ್ಮ ಯೋಧ ರತನ್ ಕುಮಾರ್ ಮತ್ತು ಸಂಜಯ್ ಕುಮಾರ್ ಸಿನ್ಹಾ ಅವರ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣ ಸಹಿತ ಭವಿಷ್ಯದಲ್ಲಿ ಅವರ ಸಂಪೂರ್ಣ ಖರ್ಚು ವೆಚ್ಚಗಳನ್ನು ತಾವು ಭರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ತನ್ನ ಎರಡು ದಿನಗಳ ವೇತನವನ್ನೂ ಸಹ ಈ ಎರಡು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲು ಉದ್ದೇಶಿಸಿರುವುದಾಗಿ ಡಿ.ಸಿ. ಇನಾಯತ್ ಖಾನ್ ಅವರು ತಿಳಿಸಿದ್ದಾರೆ.

ಮತ್ತು ತನ್ನ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರಕಾರಿ ಅಧಿಕಾರಿಗಳು ತಮ್ಮ ಒಂದು ದಿನದ ವೇತನವನ್ನು ಈ ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವಂತೆ ಅವರು ಮನವಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಉದ್ದೇಶಕ್ಕಾಗಿ ಡಿ.ಸಿ. ಮೇಡಂ ಅವರು ಶೇಖ್ ಪುರದಲ್ಲಿ ಒಂದು ಪ್ರತ್ಯೇಕ ಬ್ಯಾಂಕ್ ಅಕೌಂಟನ್ನೂ ಸಹ ತೆರೆದಿದ್ದಾರೆ. ಈ ಅಕೌಂಟ್ ಗೆ ಸಾರ್ವಜನಿಕರೂ ಸಹ ಹಣವನ್ನು ಜಮೆ ಮಾಡುವ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ತಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಬಹುದಾಗಿದೆ. ಒಟ್ಟಾರೆಯಾಗಿ ಓರ್ವ ಸರಕಾರಿ ಅಧಿಕಾರಿಯಾಗಿದ್ದುಕೊಂಡು ತನ್ನ ರಾಜ್ಯದ ಹುತಾತ್ಮ ಯೋಧರ ಕುಟುಂಬಗಳ ಸಹಾಯಕ್ಕೆ ಧಾವಿಸಿರುವ ಜಿಲ್ಲಾಧಿಕಾರಿ ಇನಾಯತ್ ಖಾನ್ ಅವರ ಈ ಕ್ರಮಕ್ಕೆ ಎಲ್ಲೆಡೆಯಿಂದ ಇದೀಗ ಶ್ಲಾಘನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next