Advertisement

ಶಾಲೆ ಆವರಣದಲ್ಲಿ ಗೆದ್ದಲು ತಿನ್ನುತ್ತಿವೆ ಮರಗಳು

11:10 AM Sep 10, 2018 | Team Udayavani |

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆ ವಠಾರದಲ್ಲಿ ಐದು ವರ್ಷಗಳಿಂದ ಕೊಂಬೆ ಮುರಿದ ಸಾವಿರಾರು ರೂ. ಬೆಲೆಬಾಳುವ ಮರಗಳು ಗೆದ್ದಲು ಹಿಡಿದಿವೆ.

Advertisement

ಶಾಲೆಯಲ್ಲಿ ಹಲವು ವರ್ಷಗಳ ಹಿಂದೆ ವನಮಹೋತ್ಸವ ಆಚರಿಸಿದ ವೇಳೆ ವಿದ್ಯಾರ್ಥಿಗಳು ನೆಟ್ಟ ಗಿಡಗಳಿಗೆ ಈಗ ಈ ಸ್ಥಿತಿ ಬಂದಿದೆ. ಈ ಮರಗಳು ರಸ್ತೆಯ ಕಡೆಗೆ ವಾಲಿ ಅಪಾಯಕಾರಿ ಸ್ಥಿತಿಯಲ್ಲಿ ನಿಂತಿವೆ. ಈ ಮರಗಳನ್ನು ಶಾಲೆಯ ಪೀಠೊಪಕರಣಗಳಿಗೆ ಬಳಸಲು ನಿರ್ಧರಿಸಿ, ಕಡಿಯಲಾಗಿತ್ತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬಂದಿ, ಮರಗಳು ಶಾಲೆಯ ಆವರಣದ ಒಳಗಿದ್ದರೂ ಗಿಡ ನೆಟ್ಟಿರುವುದಕ್ಕೆ ದಾಖಲೆ ಹಾಜರುಪಡಿಸಿದರೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. 

ಕಡಿದಿರುವ ಸಾವಿರಾರು ರೂ. ಬೆಲೆಬಾಳುವ ಮರಗಳನ್ನು ಮುಟ್ಟುಗೋಲು ಹಾಕಿಕೊಂಡು ಸ್ವಾಧೀನಪಡಿಸಿಕೊಂಡಿದ್ದಲ್ಲದೆ ಶಾಲಾಭಿವೃದ್ಧಿ ಸಮಿತಿಗೆ ದಂಡವನ್ನೂ ವಿಧಿಸಿದ್ದರು. ಈಗ 10ಕ್ಕೂ ಮಿಕ್ಕಿ ಮರಗಳು ಗೆಲ್ಲುಗಳು ಮುರಿದ ಸ್ಥಿತಿಯಲ್ಲಿ ಹಾಗೆಯೇ ಉಳಿದು ಗೆದ್ದಲು ಹಿಡಿದಿವೆ. ಈ ಮರಗಳು ಶಾಲೆಗೂ ಬಳಕೆಯಾಗಿಲ್ಲ, ಅರಣ್ಯ ಇಲಾಖೆಯೂ ಅವುಗಳನ್ನು ಸಾಗಿಸಿಲ್ಲ. ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಏನು ಮಾಡಲು ಸಾಧ್ಯ?
ಆವರಣದೊಳಗೆ ಹಿರಿಯ ವಿದ್ಯಾರ್ಥಿಗಳು ನೆಟ್ಟು ಬೆಳೆಸಿದ ಮರಗಳಿವು. ಈಗ ಅಪಾಯದಲ್ಲಿದ್ದು, ಶಾಲಾಭಿವೃದ್ಧಿ ಸಮಿತಿ ಸಭೆ ನಡೆಸಿ, ಬೆಂಟ್‌ ಹಾಗೂ ಡೆಸ್ಕ್ ರಚಿಸಲು ಅವುಗಳನ್ನು ಕತ್ತರಿಸಲು ತೀರ್ಮಾನಿಸಿತ್ತು. ಮರಗಳನ್ನು ಕಡಿಯುವ ಹೊತ್ತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ, ಕಡಿದ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆ ಹಾಜರುಪಡಿಸುವಂತೆ ತಿಳಿಸಿದ್ದಾರೆ. ಈ ಹಿಂದೆ ಶಾಲೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಹಲವು ದಾಖಲೆಗಳು ಸುಟ್ಟುಹೋಗಿವೆ. ಏನು ಮಾಡಲು ಸಾಧ್ಯ?
– ಕೆ. ಮಹಾಲಿಂಗ,
ಶಾಲಾ ಮುಖ್ಯ ಗುರು

ದಾಖಲೆಗಳು ಸುಟ್ಟಿವೆ
ಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆಂದೇ ಮರಗಳನ್ನು ಕಡಿಸಿದ್ದು. ದಾಖಲೆಗಳು ಸುಟ್ಟು ಹೋಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲಾಖಾಧಿಕಾರಿಗಳಿಗೆ ಇದನ್ನು ಮನವರಿಕೆ ಮಾಡಲು ಯತ್ನಿಸಿದರೂ ದಂಡ ವಿಧಿಸಿದ್ದಾರೆ. 10ಕ್ಕೂ ಹೆಚ್ಚು ಮರಗಳು ಗೆದ್ದಲು ಹಿಡಿಯುವ ಸ್ಥಿತಿಯಲ್ಲಿವೆ.
– ಇಲ್ಯಾಸ್‌ ಕರಾಯ, ಎಸ್‌ಡಿಎಂಸಿ ಸದಸ್ಯ

Advertisement

ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next