Advertisement

ತೆರವಾಗದ ಒತ್ತುವರಿ, ಮತ್ತೆ ಮುಳುಗಡೆ ಭೀತಿ

11:37 AM Mar 12, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲ ದಲ್ಲಿ ಉಂಟಾಗುವ ಅನಾಹುತ ತಡೆಗೆ ಬಿಬಿಎಂಪಿ ಯಿಂದ ಕೈಗೆತ್ತಿಕೊಂಡಿದ್ದ ಕಾಮಗಾರಿಗಳು ಆಮೆಗತಿ ಯಲ್ಲಿ ಸಾಗುತ್ತಿದ್ದು, ನಗರದಲ್ಲಿ ಭಾರಿ ಮಳೆಯಾದರೆ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗುವ ಆತಂಕ ಮತ್ತೆ ಎದುರಾಗಿದೆ. 

Advertisement

ಕಳೆದ ವರ್ಷ ನಗರದಲ್ಲಿ ರಾಜಕಾಲುವೆ ತಡೆಗೋಡೆ ನಿರ್ಮಾಣ, ದುರಸ್ತಿ, ಹೂಳೆತ್ತುವುದು, ಒತ್ತುವರಿ ತೆರವು ಕಾರ್ಯಾಚರಣೆಯಂತಹ ಹಲವು ಕಾರ್ಯಕ್ರಮ ಗಳಿಗೆ ಚಾಲನೆ ನೀಡಲಾಗಿತ್ತು. ಸರ್ಕಾರದಿಂದ ಹಣ ಬಿಡುಗಡೆ ಮಾಡಿದರೂ ಟೆಂಡರ್‌ ಕರೆಯುವುದರಲ್ಲಿ ವಿಳಂಬವಾಗಿದ್ದರಿಂದ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. 

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ರಾಜಕಾಲುವೆ ನಿರ್ವಹಣೆಗೆ 800 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ, ಸರ್ಕಾರದಿಂದ ಆರು ಪ್ಯಾಕೇಜ್‌ಗಳಿಗೆ ಅನುಮೋದನೆ ದೊರಕಿದೆಯಾದರೂ ಇತ್ತೀ ಚೆಗೆ ಟೆಂಡರ್‌ ಕರೆದಿರುವುದರಿಂದ ಮಳೆಗಾಲದೊಳಗೆ ಕಾಮಗಾರಿಗಳು ಆರಂಭವಾಗುವುದು ಅನುಮಾನ ಮೂಡಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರೂ ಈವರೆಗೆ ಇಂತಹ ಕಾಮಗಾರಿಗಳು ಆರಂಭವಾಗಿಲ್ಲ. 

ಕಳೆದ ಜೂನ್‌ ತಿಂಗಳಲ್ಲಿ ನಗರದಲ್ಲಿ ಸುರಿದ ಭಾರಿ ಮಳೆಗೆ ಬೊಮ್ಮನಹಳ್ಳಿಯ ಹಲವು ಬಡಾವಣೆಗಳು ಜಲಾವೃತಗೊಂಡು ಅಲ್ಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು ಕೂಡಲೇ ನಗರದಲ್ಲಿ ರಾಜಕಾಲುವೆ ಒತ್ತುವರಿಯನ್ನು ನಾಲ್ಕು ತಿಂಗಳೊಳಗೆ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶಿಸಿದ್ದರು. 

ಇದರೊಂದಿಗೆ ಪರಿಸ್ಥಿತಿ ನಿರ್ವಹಣೆಗಾಗಿ 139 ಕೋಟಿ ರೂ. ಬಿಡುಗಡೆ ಮಾಡಿದ್ದರು. ಮುಖ್ಯಮಂತ್ರಿಗಳ ಆದೇಶದ ನಡುವೆಯೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದು, ಈವರೆಗೆ ಬಿಡುಗಡೆಯಾಗಿ ರುವ ಹಣಕ್ಕೆ ಟೆಂಡರ್‌ ಕರೆಯಲು ಪಾಲಿಕೆಯ ಅಧಿಕಾರಿಗಳು ಮುಂದಾಗಿಲ್ಲ. ಇನ್ನು 8 ತಿಂಗಳು ಕಳೆದರೂ ರಾಜಕಾಲುವೆ ಒತ್ತುವರಿಯನ್ನು ಸಂಪೂರ್ಣ ವಾಗಿ ತೆರವುಗೊಳಿಸಲು ಸಾಧ್ಯವಾಗಿಲ್ಲ.

Advertisement

ತೆರವು 300, ಬಾಕಿ ಉಳಿದಿದ್ದು 800!
ಪಾಲಿಕೆಯಲ್ಲಿ ಒಟ್ಟು 1921 ರಾಜಕಾಲುವೆ ಒತ್ತುವರಿ ಪ್ರಕರಣಗಳನ್ನು ಅಧಿಕಾರಿಗಳು ಗುರುತಿಸಿದ್ದರು. ಈ ಪೈಕಿ ಈವರೆಗೆ 1,100 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ 800 ಪ್ರಕರಣಗಳ ಪೈಕಿ 350ಕ್ಕೂ ಹೆಚ್ಚು ಕಡೆ ಆದ್ಯತೆ ಮೇರೆಗೆ ಒತ್ತುವರಿ ತೆರವುಗೊಳಿಸುವುದು ಅನಿವಾರ್ಯವಾಗಿದೆ. ಒಂದೊಮ್ಮೆ ಮಳೆಗಾಲದೊಳಗೆ ಈ 350 ಕಡೆ ಒತ್ತುವರಿ ತೆರವುಗೊಳಿಸದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಅರಿವಿದ್ದರೂ ಅಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಲು ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಪಾಲಿಕೆ ವಲಯದಲ್ಲಿ ಕೇಳಿಬಂದಿದೆ.

ಹೂಳೆತ್ತುವುದು ಯಾವಾಗ?
ವರ್ಷದ ಹಿಂದೆಯೇ ರಾಜ ಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರೂ, ಈವರೆಗೆ ರಾಜಕಾಲುವೆಯ ಒಟ್ಟು ಉದ್ದದ ಶೇ.25ರಷ್ಟು ಭಾಗ ದಲ್ಲಿಯೂ ಹೂಳೆತ್ತಿಲ್ಲ ಎಂಬು ದನ್ನು ಸ್ವತಃ ಬೃಹತ್‌ ಮಳೆ ನೀರುಗಾಲುವೆ ವಿಭಾಗದ ಅಧಿಕಾರಿಗಳೇ ಒಪ್ಪಿಕೊಳ್ಳು ತ್ತಾರೆ. ಜತೆಗೆ ಸೂಕ್ಷ್ಮ ಪ್ರದೇಶ ಗಳಲ್ಲಿ ತಡೆಗೋಡೆ ಹಾಗೂ ತಂತಿಬೇಲಿ ಅಳವಡಿಕೆಗೂ ಮುಂದಾಗದ ಕಾರಣ ಮಳೆ ಗಾಲದಲ್ಲಿ ಅನುಹುತಗಳು ಸಂಭವಿಸುವ ಆತಂಕವಿದೆ. 

ಕಾಲುವೆ ನಿರ್ಮಾಣವಾಗಿಲ್ಲ!
ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕಾಲುವೆ ಜಾಗದಲ್ಲಿ ನಿರ್ಮಾಣವಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಲು ತೋರಿಸಿದ ಆಸಕ್ತಿಯನ್ನು ಬಳಿಕ ರಾಜಕಾಲುವೆ ನಿರ್ಮಾಣ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ತೋರುತ್ತಿಲ್ಲ. ಅವನೀ ಶೃಂಗೇರಿ ನಗರ ಹೊರತುಪಡಿಸಿ ದೊಡ್ಡಬೊಮ್ಮಸಂದ್ರ, ಕಸವನಹಳ್ಳಿ, ದಾಸರಹಳ್ಳಿ ಸೇರಿದಂತೆ ಹಲವಾರು ಭಾಗಗಳಲ್ಲಿ ರಾಜಕಾಲುವೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಹೈಕೋರ್ಟ್‌ ಆದೇಶ ಪಾಲನೆಯಿಲ್ಲ
ಜೆ.ಸಿ.ನಗರ ವಾರ್ಡ್‌ನ ಮಠದ ಹಳ್ಳಿಯ ರಾಜ ಕಾಲುವೆ ಜಾಗದಲ್ಲಿ ನಿರ್ಮಾಣ ವಾಗಿದೆ ಎನ್ನಲಾದ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಪ್ರಕರಣದಲ್ಲಿ ಒಂದು ವಾರದೊಳಗೆ ಸರ್ವೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವಂತೆ ಹೈಕೋರ್ಟ್‌ ಪಾಲಿಕೆ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೆ, ಅಧಿಕಾರಿ ಗಳು ಮಾತ್ರ ತಿಂಗಳು ಕಳೆದರೂ ಸರ್ವೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ.

ರಾಜಕಾಲುವೆಗಳ ನಿರ್ವಹಣೆ ಗಾಗಿ 700 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಮುಂದಾಗಿದ್ದು, ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾ ಚರಣೆ ಮುಂದುರಿಯಲಿದೆ.
-ಕೆ. ಜೆ. ಜಾರ್ಜ್‌, ಬೆಂಗಳೂರು ನಗರ ಅಭಿವೃದ್ಧಿ ಸಚಿವ

ನಗರದ ಹಲವಾರು ಭಾಗಗಳಲ್ಲಿ ರಾಜಕಾಲುವೆಯಲ್ಲಿ ಹೂಳೆತ್ತುವ, ತಡೆಗೋಡೆ ನಿರ್ಮಾಣ ಮತ್ತು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರಿಸಲಾಗಿದೆ. ದೊಡ್ಡ ಮಟ್ಟದಲ್ಲಿ ತೆರವು ಕಾರ್ಯಾಚರಣೆ ನಡೆಸದಿರುವುದರಿಂದ ಸ್ಥಗಿತಗೊಳಿಸಲಾಗಿದೆ ಎಂದಲ್ಲ.
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ರಾಜಕಾಲುವೆಗಳ ನಿರ್ವಹಣೆಗೆ ರಾಜ್ಯ ಸರ್ಕಾರ 800 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದೆಯಾದರೂ, ಈವರೆಗೆ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿ ಒಂದು ವರ್ಷದಲ್ಲಿ ಮುಗಿಯಲಿರುವುದರಿಂದ ಟೆಂಡರ್‌ ಕರೆದು ಹಣ ಲೂಟಿ ಮಾಡುವ ಹುನ್ನಾರಕ್ಕೆ ಕಾಂಗ್ರೆಸ್‌ ಮುಂದಾಗಿದೆ.
-ಪದ್ಮನಾಭ ರೆಡ್ಡಿ, ಬಿಬಿಎಂಪಿ ಪ್ರತಿಪಕ್ಷ ನಾಯಕ

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next