ರಾಮದುರ್ಗ: ಎಷ್ಟೋ ವರ್ಷಗಳಿಂದ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಸಾಕಷ್ಟು ರೈತರು ಸಂಕಷ್ಟ ಅನುಭವಿಸುತ್ತಿರುವ ಸಮಯದಲ್ಲಿಯೇ, ಅಲ್ಪಸ್ವಲ್ಪ ಮಳೆ ನಂಬಿಕೊಂಡು ಬಿತ್ತನೆ ಮಾಡಿದ್ದ ನದಿ ಪಾತ್ರದ ರೈತರಿಗೆ ಮಳೆಯಾಗದೇ ಬಂದ ಪ್ರವಾಹ ಬದುಕನ್ನೇ ಬರಡಾಗುವಂತೆ ಮಾಡಿದೆ.
ಪ್ರವಾಹದಿಂದಾಗಿ ತಾಲೂಕಿನಲ್ಲಿ ಕೃಷಿಯ ಅಂದಾಜು 15,350 ಹೆಕ್ಟೇರ್ ಹಾಗೂ ತೋಟಗಾರಿಕೆಯ 383 ಹೆಕ್ಟೇರ್ ಒಳಗೊಂಡು 15,733 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ತಾಲೂಕಿನಲ್ಲಿ ಮಳೆಯಾಗದ ಕಾರಣ ಅರ್ಧ ಪ್ರದೇಶದ ರೈತರು ಬಿತ್ತನೆ ಮಾಡದೇ ಸಂಕಷ್ಟದಲ್ಲಿದ್ದರೆ, ಇತ್ತೀಚೆಗೆ ಸುರಿದ ಅಲ್ಪಸ್ವಲ್ಪ ಮಳೆಯನ್ನು ನಂಬಿಕೊಂಡು ನದಿಯ ಪಕ್ಕದ ರೈತರು ಸಾಲಸೋಲ ಮಾಡಿ ಬೀಜ ಹಾಕಿ ಬೆಳೆದ ಬೆಳೆ ಇಂದು ಮಲಪ್ರಭಾ ಪ್ರವಾಹಕ್ಕೆ ಕೊಚ್ಚಿ ಹೋಗಿ ಭೂಮಿಯೇ ಗುರುತು ಸಿಗದಂತಾಗಿದೆ.
ನದಿ ಪಾತ್ರಕ್ಕೆ ಹೊಂದಿಕೊಂಡ ಬಹುತೇಕ ರೈತರು ಕಬ್ಬು, ಬಾಳೆ ಬೆಳೆಯನ್ನು ಮೂಲ ಬೆಳೆಯನ್ನಾಗಿ ನಾಟಿ ಮಾಡಿ ಜೀವನ ಮಾಡುತ್ತಿದ್ದರು. ಇನ್ನೂ ಕೆಲ ರೈತರು ತರಕಾರಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆದು ಹಾಗೋ ಹೀಗೋ ಜೀವನ ಸಾಗಿಸಿಕೊಂಡು ಬರುತ್ತಿದ್ದರು. ಆದರೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಂದ ಪ್ರವಾಹ ರೈತರ ಜೀವನವನ್ನೆ ಹಿಂಡಿ ಹಿಪ್ಪೆ ಮಾಡಿದ್ದು, ಜಾನುವಾರುಗಳು ಮೇವಿಗಾಗಿ ಪರಿತಪಿಸುವಂತಾಗಿದೆ.
ಹೊಟ್ಟೆಯ ಮೇಲೆ ಬರೆ: ಈಗಿನ ಪರಿಸ್ಥಿತಿಯಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಜನ ಜೀವನ ಸಾಗಿಸುವುದು ತುಂಬಾ ದುಸ್ತರವಾಗಿದೆ. ವಾಣಿಜ್ಯ ಬೆಳೆ ಬೆಳೆದು ವರ್ಷವಿಡೀ ಕಾಯುವ ರೈತರ ಸಮಸ್ಯೆ ಒಂದಾದರೆ ಹೊಲದಲ್ಲಿ ಬರುವ ತರಕಾರಿಯನ್ನು ದಿನನಿತ್ಯ ಮಾರಿಕೊಂಡು ಬದುಕು ಸಾಗಿಸುವ ರೈತರ ಬದುಕು ಇನ್ನೂ ಶೋಚನಿಯವಾಗಿದೆ.
ಸಾಲದ ಸುಳಿಗೆ ಸಿಲುಕಿದ ರೈತರು: ಇದ್ದ ಬದ್ದ ಹಣವನ್ನೆಲ್ಲ ಹೊಲಗಳಿಗೆ ಸುರಿದ ರೈತರು ಒಂದು ಕಡೆಯಾದರೆ, ಸಾಲ ಸೋಲ ಮಾಡಿ ಬಿತ್ತನೆ ಮಾಡಿ ಮುಂದೆ ಬರುವ ಬೆಳೆಯನ್ನು ನಂಬಿಕೊಂಡಿದ್ದ ರೈತರಿಂದು ಸಾಲದ ಸುಳಿಗೆ ಸಿಲುಕುವಂತಾಗಿದೆ. ಈಗಾಗಲೇ ಮಾಡಿದ ಸಾಲ ತೀರಿಸಲಾಗದ ರೈತರು ಸಾಕಷ್ಟಿರುವಾಗ ಪ್ರವಾಹದಿಂದಾದ ಅನಾಹುತ ಅವರನ್ನು ಮತ್ತಷ್ಟು ಸಾಲದ ಕೂಪಕ್ಕೆ ತಳ್ಳಿದೆ.
ಆತಂಕದಲ್ಲಿ ರೈತರು: ಪ್ರವಾಹದ ಹೊಡೆತಕ್ಕೆ ಹಾಗೂ ಬೆಳೆ ಹಾಳಾಗಿದ್ದಲ್ಲದೇ ಭೂಮಿ ಕೂಡ ಗುರುತು ಸಿಗದಂತಾಗಿದೆ. ಹೊಲಗಳಲ್ಲಿನ ಫಲವತ್ತಾದ ಮಣ್ಣು ನೀರಿಗೆ ಕೊಚ್ಚಿ ಹೋಗಿ ಬೃಹದಾಕಾರದ ಕೊರಕಲುಗಳು ಬಿದ್ದಿವೆ. ಇನ್ನೂ ಕೆಲ ಹೊಲಗಳಲ್ಲಿ ಸಾಕಷ್ಟು ಕಲ್ಲುಗಳು ಬಂದು ಬಿದ್ದಿದ್ದು, ಉಳುಮೆ ಮಾಡಲು ಬಾರದಂತಾಗಿದೆ. ಅದನ್ನು ಸರಿಪಡಿಸಬೇಕಾದರೆ ಎಷ್ಟೋ ವರ್ಷಗಳು ಬೇಕು. ಹೀಗಾದರೇ ಮುಂದೆ ನಮ್ಮ ಗತಿ ಏನು ಎಂಬ ಚಿಂತೆ ರೈತರದಾಗಿದೆ.
•ಈರನಗೌಡ ಪಾಟೀಲ