Advertisement

ಜು. 15ರೊಳಗೆ ಟೆಂಡರ್‌ಶ್ಯೂರ್‌ ರಸ್ತೆ ಪೂರ್ಣ

09:26 AM Jun 09, 2019 | Team Udayavani |

ಹುಬ್ಬಳ್ಳಿ: ಮಹಾನಗರಕ್ಕೆ ಮಾದರಿಯಾಗಿರುವ ಟೆಂಡರ್‌ಶ್ಯೂರ್‌ ರಸ್ತೆ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದ್ದು, ಜು. 15ರೊಳಗೆ ಪೂರ್ಣಗೊಳ್ಳುವ ಭರವಸೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.

Advertisement

ಜನಾ ಅರ್ಬನ್‌ ಸ್ಪೇಸ್‌ ಫೌಂಡೇಶನ್‌ ವ್ಯವಸ್ಥಾಪಕಿ ಸ್ವಾತಿ ರಾಮನಾಥನ್‌ ಅವರೊಂದಿಗೆ ಶನಿವಾರ ಇಲ್ಲಿನ ಶ್ರೀ ಕಾಡಸಿದ್ಧೇಶ್ವರ ಕಾಲೇಜಿನಿಂದ ತೋಳನ ಕರೆಯವರೆಗೆ ನಿರ್ಮಾಣವಾಗುತ್ತಿರುವ ಟೆಂಡರ್‌ಶ್ಯೂರ್‌ ರಸ್ತೆ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜು. 15ರೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ಇದು ಮಾದರಿ ಹಾಗೂ ಸುಸಜ್ಜಿತ ರಸ್ತೆಯಾಗಿರುವುದರಿಂದ ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಒತ್ತುವರಿ ತೆರವು ಕಾರ್ಯಾಚರಣೆ, ವಿವಿಧ ಇಲಾಖೆ ಕೆಲಸ ಕಾರ್ಯಗಳ ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ನಿಗದಿತ ಸಮಯದೊಳಗೆ ಎಲ್ಲವೂ ಕೈಗೊಂಡಿದ್ದರೆ, ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಒಂದಿಷ್ಟು ವಿಳಂಬವಾಗಿದೆ ಎನ್ನುವುದು ಬಿಟ್ಟರೆ ನಮ್ಮ ನಿರೀಕ್ಷೆಯಂತೆ ಕಾಮಗಾರಿ ನಡೆದಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ರಸ್ತೆಗಿಂತ ಇಲ್ಲಿ ಉತ್ತಮವಾಗಿ ನಿರ್ಮಿಸಲಾಗುತ್ತಿದೆ ಎಂದರು.

ಜನಾ ಅರ್ಬನ್‌ ಸ್ಪೇಸ್‌ ಪ್ರತಿಷ್ಠಾನ ವ್ಯವಸ್ಥಾಪಕಿ ಸ್ವಾತಿ ರಾಮನಾಥನ್‌ ಮಾತನಾಡಿ, ಪಾದಚಾರಿ ಮಾರ್ಗ, ವಿವಿಧ ಇಲಾಖೆ ಭೂಗತ ಕೇಬಲ್ಗಳ ಪ್ರತ್ಯೇಕ ಮಾರ್ಗ, ಬೈಸಿಕಲ್ ಸವಾರರಿಗೆ ಪ್ರತ್ಯೇಕ ಮಾರ್ಗ ಸೇರಿದಂತೆ ಹಲವು ಸೌಲಭ್ಯಗಳಿರುವ ಮಾದರಿ ರಸ್ತ್ತೆಯಾಗಿದ್ದು, ಇಲ್ಲಿ ಲಭ್ಯವಿರುವ ಜಾಗಕ್ಕೆ ತಕ್ಕಂತೆ ವಿನ್ಯಾಸ ಮಾಡಿದ್ದು, ಸ್ಥಳದ ಕೊರತೆಯಿಂದ ವಾಹನ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಮುಂದಿನ ಆರು ವಾರಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಈ ರಸ್ತೆಯನ್ನು ಜವಾಬ್ದಾರಿಯಿಂದ ಬಳಸಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಇ ಎನ್‌.ಎಂ. ಕುಲಕರ್ಣಿ, ಎಚ್.ಎಂ. ಕೃಷ್ಣಾರಡ್ಡಿ ಇನ್ನಿತರರಿದ್ದರು.

ಅವೈಜ್ಞಾನಿಕ ಜಂಕ್ಷನ್‌ ಅಭಿವೃದ್ಧಿ:

ಸಿದ್ದೇಶ್ವರ ವೃತ್ತದಲ್ಲಿ ಟೆಂಡರ್‌ಶ್ಯೂರ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಸಿಆರ್‌ಎಫ್ ರಸ್ತೆ ಎತ್ತರವಾಗಿರುವುದನ್ನು ಸ್ವಾತಿ ರಾಮನಾಥನ್‌ ಗಮನಿಸಿದರು. ಸಿಆರ್‌ಎಫ್ ರಸ್ತೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಪರಿಣಾಮ ಜಂಕ್ಷನ್‌ನಲ್ಲಿ ಜನರು ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಎರಡು ರಸ್ತೆಗಳು ಸಮಾನಾಂತರವಾಗಿರಬೇಕು. ಈಗಾಗಲೇ ನಿರ್ಮಿಸಿರುವ ರಸ್ತೆಗೆ ಅನುಗುಣವಾಗಿ ಹೊಸ ರಸ್ತೆ ನಿರ್ಮಾಣ ಮಾಡಬೇಕಿತ್ತು. ಇದನ್ನು ಮರೆತು ರಸ್ತೆ ಮಾಡಿದ್ದರಿಂದ ಸಿಆರ್‌ಎಫ್ ರಸ್ತೆ ಎತ್ತರವಾಗಿದೆ. ಯಾವುದೇ ಕಾರಣಕ್ಕೂ ಟೆಂಡರ್‌ಶ್ಯೂರ್‌ ಯೋಜನೆಗೆ ಧಕ್ಕೆ ಬಾರದಂತೆ ಅಧಿಕಾರಿಗಳು ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next