ಕಲಬುರಗಿ: ನಗರದ ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ವೃತ್ತದ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ರಸ್ತೆ ಮೇಲ್ಸೇತುವೆ ಕಾಮಗಾರಿ ಟೆಂಡರ್ ಲ್ಲಿ ನಿಯಮ ಉಲ್ಲಂಘನೆಯಾಗಿರುವ ಕುರಿತ ವಿಷಯ ಈಗ ಹೈಕೋರ್ಟ್ ಮೆಟ್ಟಿಲೇರಿದೆ.
ಕೆಕೆಆರ್‌ಡಿಬಿ ಅನುದಾನದಡಿ ಖರ್ಗೆ ಪೆಟ್ರೋಲ್ ವೃತ್ತದ ಬಳಿಯ ಬಹುಕೋಟಿ ವೆಚ್ಚದ ರಸ್ತೆ ಮೇಲ್ಸೆತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಪಡೆಯದೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವುದರ ಜತೆಗೆ ಟೆಂಡರ್ ಮೊತ್ತದಲ್ಲಿ ಅಂತಿಮವಾಗಿ ಶೇ. 57ರಷ್ಟು ಹೆಚ್ಚಳವಾಗಿರುವುದು ಗೋಲ್ ಮಾಲ್‌ಗೆ ಕಾರಣವಾಗಿದೆ. 2020-21ನೇ ಸಾಲಿನ ಕೆಕೆಆರ್‌ಡಿಬಿ ಪ್ರಾದೇಶಿಕ ನಿಧಿ ಯೋಜನೆ ಅಡಿ ರಸ್ತೆ ಮೇಲ್ಸೇತುವೆಗೆ ಟೆಂಡರ್ ಕರೆಯಲಾಗಿದೆ. ಆದರೆ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಪಡೆಯದೇ ಟೆಂಡರ್ ಕರೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ತಪ್ಪಿತಸ್ಥರು ಶಿಸ್ತು ಕ್ರಮ ಎದುರಿಸುವಂತಾಗಿದೆ.
ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿ ಕೋರಿಕೆ: ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಪಡೆಯದೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವುದರಿಂದ ನಿಯಮ ಉಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಕುರಿತು “ಉದಯವಾಣಿ’ಯಲ್ಲಿ “ಟೆಂಡರ್ ನಿಯಮದಲ್ಲಿ ಉಲ್ಲಂಘನೆ’ ಎಂಬ ವಿಶೇಷ ವರದಿ ಪ್ರಕಟಿಸಲಾಗಿತ್ತು. ನಿಯಮಾನುಸಾರವಾಗಿ ಆಡಳಿತಾತ್ಮಕ ಅನುಮೋದನೆ ಪಡೆಯದೇ ಟೆಂಡರ್ ಕರೆದಿರುವುದು ಕಾನೂನು ಬಾಹಿರವಾಗಿದೆ. ಕಾರಣ ಕಾಮಗಾರಿ ಅನುಷ್ಠಾನಾಧಿಕಾರಿಗಳಾಗಿರುವ ರಾಷ್ಟ್ರೀಯ ಹೆದ್ದಾರಿ ಕಲಬುರಗಿ ವಿಭಾಗದ ಕಾರ್ಯಪಾಲಕ ಅಭಿಯಂತರರು ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಅಭಿಯಂತರ ವಿರುದ್ಧ ಕೆಪಿಎಸ್‌ಆರ್ ನಿಯಮಾವಳಿ ಪ್ರಕಾರ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ಜಿಲ್ಲಾಧಿಕಾರಿಗಳು ಕಳೆದ ಜೂನ್ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗಳು ಶಿಸ್ತುಕ್ರಮ ಕೋರಿ ಪತ್ರ ಬರೆದಿರುವುದರಿಂದ ಟೆಂಡರ್ ನಿಯಮ ಉಲ್ಲಂಘನೆ ಕಾರ್ಯ ಸಾಬೀತುಪಡಿಸಿದಂತಾಗಿದೆ.
ಇದನ್ನೂ ಓದಿ:ಕಮಿಷನ್ ದಂಧೆ ಆರೋಪ ಮಾಡುವವರು ದಾಖಲೆ ನೀಡಲಿ: ಸಚಿವ ಬಿ.ಸಿ.ಪಾಟೀಲ್
ನ್ಯಾಯಾಲಯದಲ್ಲಿ ದೂರು: ಆಡಳಿತಾತ್ಮಕ ಮಂಜೂರಾತಿ ಇಲ್ಲದೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವುದು ಹಾಗೂ ಟೆಂಡರ್ ಮೊತ್ತದಲ್ಲೂ ಭಾರಿ ಹೆಚ್ಚಳ ಮಾಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲಾಗಿದೆ. ಟೆಂಡರ್ ನಿಯಮದಲ್ಲಿ ಉಲ್ಲಂಘನೆ ಹಾಗೂ ಟೆಂಡರ್ ಮೊತ್ತದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳಗೊಳಿಸಿದ್ದನ್ನು ದಾಖಲೆಗಳ ಸಮೇತ ಇಲ್ಲಿನ ಹೈಕೋರ್ಟ್ ಪೀಠದಲ್ಲಿ ದೂರು ಸಲ್ಲಿಸಲಾಗಿದೆ. ದೂರು ಸ್ವೀಕಾರವಾಗಿದ್ದು, ವಿಚಾರಣೆ ನಡೆದಿದೆ. ಒಟ್ಟಾರೆ ಕೆಕೆಆರ್‌ಡಿಬಿ ಅನುದಾನದ ರಸ್ತೆ ಮೇಲ್ಸೇತುವೆ ಕಾಮಗಾರಿ ನಿಯಮದಲ್ಲಿ ಉಲ್ಲಂಘನೆ ಯಾಗಿರುವುದು ಹಾಗೂ ಟೆಂಡರ್ ಇಲ್ಲದೇ ಬೇರೆ ಕಾಮಗಾರಿಗಳನ್ನು ಮಾಡಿರುವುದು, ಅದರಲ್ಲೂ ಕಣ್ಣಿ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಸ್ವತಃ ಮುಖ್ಯಮಂತ್ರಿಗಳೇ ಅಡಿಗಲ್ಲು ಹಾಕಿರುವುದು, ತದನಂತರ ಟೆಂಡರ್ ರದ್ದಾಗಿರುವುದು ಇವನ್ನೆಲ್ಲ ಅವಲೋಕಿಸಿದರೆ ಟೆಂಡರ್‌ದಲ್ಲಿ ಗೋಲ್ ಮಾಲ್ ನಡೆದಿರುವ ಕುರಿತು ಅನುಮಾನ ಮೂಡದೇ ಇರದು.