ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತಲಿನ ಭಾಗಗಳಲ್ಲಿ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ಟೆಂಡರ್‌ಶ್ಯೂರ್ ರಸ್ತೆಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಾರ್ವಜನಿಕರಿಗೆ ಮುಕ್ತಗೊಳಿಸಿದರು.
ರಸ್ತೆಗಳನ್ನು ಮತ್ತೆ ಮತ್ತೆ ಅಗೆಯುವುದನ್ನು ತಪ್ಪಿಸುವ ಉದ್ದೇಶದಿಂದ ಗಾಂಧಿನಗರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ ಸೇರಿದಂತೆ ಇನ್ನಿತರ ರಸ್ತೆಗಳನ್ನು ಟೆಂಡರ್‌ಶ್ಯೂರ್ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಅದರಂತೆ ಕಾಮಗಾರಿ ಪೂರ್ಣಗೊಂಡಿರುವ ಗಾಂಧಿನಗರ ವಾರ್ಡ್‌ನ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.
ಟೆಂಡರ್‌ಶ್ಯೂರ್ ರಸ್ತೆಯಲ್ಲಿ ಸ್ಮಾರ್ಟ್‌ಕಾರ್ಡ್ ಬಳಸುವ ಸೈಕಲ್ ನಿಲುಗಡೆ ತಾಣ, ಇ-ಆಟೋ ನಿಲುಗಡೆ, ಇ-ಶೌಚಗೃಹ, ಕುಡಿಯುವ ನೀರಿನ ಘಟಕ ಮತ್ತು ಎಟಿಎಂ, ಸೆನ್ಸಾರ್ ಆಧರಿತ ಡಸ್ಟ್ ಬಿನ್, ಸುಸಜ್ಜಿತ ಪಾದಚಾರಿ ಮಾರ್ಗ, ಪಾದಚಾರಿ ಮಾರ್ಗದಡಿ ಒಎಫ್‌ಸಿ, ನೀರಿನ ಪೈಪ್, ವಿದ್ಯುತ್ ತಂತಿಗಳ ಅಳವಡಿಕೆಗೆ ವ್ಯವಸ್ಥೆ, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಹಾಗೂ ಮಳೆ ನೀರು ರಸ್ತೆಯ ಮೇಲೆ ನಿಲ್ಲದ ರೀತಿಯಲ್ಲಿ ಎರಡೂ ಕಡೆ ಸರಿಯಾದ ಚರಂಡಿ ವ್ಯವಸ್ಥೆ ಮಾಡಲಾಗಿದೆ.
ಅದರಂತೆ ಸುಬೇದಾರ್ ಛತ್ರಂ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ, ಡಬ್ಲೂಎಚ್ ಹನುಮಂತಪ್ಪ ರಸ್ತೆ, ಗಾಂಧಿನಗರ ಸುತ್ತಲಿನ ರಸ್ತೆ, ಬಾಷ್ಯಂ ರಸ್ತೆ (ಕಾಟನ್ ಪೇಟೆ ಮುಖ್ಯ ರಸ್ತೆ) ಸೇರಿದಂತೆ ಒಟ್ಟು 9.73 ಕಿ.ಮೀ ರಸ್ತೆಯನ್ನು ನಗರೋತ್ಥಾನ ಅನುದಾನದಡಿ 129.43 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಅಮೃತ ಕನ್ಸ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನೀಡಲಾಗಿದೆ.
ಮೊದಲ ಹಂತದಲ್ಲಿ ಗಾಂಧಿನಗರದ 3, 4, 5 ಹಾಗೂ 6ನೇ ಅಡ್ಡರಸ್ತೆ, ಕಾಳಿದಾಸ ರಸ್ತೆ ಜಂಕ್ಷನ್‌ನಿಂದ ಸುಬೇದಾರ್ ಛತ್ರಂ ರಸ್ತೆಯವರೆಗೆ ಕಾಮಾಗಾರಿ ಪೂರ್ಣಗೊಳಿಸಲಾಗಿದೆ. ಮೆಜೆಸ್ಟಿಕ್ ಸುತ್ತಮುತ್ತಲಿನ 5 ರಸ್ತೆ, ಎಸ್.ಸಿ ರಸ್ತೆ, ಕೆ.ಜಿ.ರಸ್ತೆ ಸೇರಿದಂತೆ ಉಳಿದ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ.
ಗಾಂಧಿನಗರದ ಸುತ್ತಮುತ್ತಲಿನ 29 ರಸ್ತೆಗಳನ್ನು 129 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ಶ್ಯೂರ್‌ಗೊಳಿಸಲು ಮುಂದಾಗಿದ್ದು, ಈಗಾಗಲೇ ಕೆಲವು ರಸ್ತೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಉಳಿದ ರಸ್ತೆಗಳಲ್ಲಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ