Advertisement

ಜಾತ್ರೆ ಟೆಂಡರ್‌ನಲ್ಲಿ ಅಕ್ರಮ: ಏಕಾಂಗಿ ಧರಣಿ

04:16 PM Oct 26, 2023 | Team Udayavani |

ಹಾಸನ: ಶ್ರೀ ಹಾಸನಾಂಬ ದೇಗುಲದ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಗಳ ಟೆಂಡರುಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತ, ಹಾಸನ ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮನೋಹರ್‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏಕಾಂಗಿ ಧರಣಿ ನಡೆಸಿದರು.

Advertisement

ಇದುವರೆಗೆ ಜಾತ್ರಾಮಹೋತ್ಸವದ ಹೂವಿನ ಅಲಂಕಾರ, ದೀಪಾಲಂಕಾರ ಸೇರಿದಂತೆ ಬಹುತೇಕ ಗುತ್ತಿಗೆಗಳನ್ನು ಒಬ್ಬರಿಗೆ ನೀಡುತ್ತಾ ಬರಲಾಗಿದೆ. ಆ ಒಬ್ಬ ವ್ಯಕ್ತಿಗೆ ಟೆಂಡರ್‌ ಸಿಗುವಂತೆ ಟೆಂಡರ್‌ ನಿಯಮಗಳನ್ನು ರೂಪಿಸಲಾಗಿದೆ. ಕಳೆದ ಬಾರಿ ಒಂದು ಕಾಮಗಾರಿಗೆ ಎರಡು ಬಾರಿ ಬಿಲ್‌ ಮಾಡಿದ ಉದಾಹರಣೆಯೂ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಹಾಸನಾಂಬ ದೇವಸ್ಥಾನವು ಎ ದರ್ಜೆಯ ದೇವಸ್ಥಾನಗಳಲ್ಲಿ ಒಂದಾಗಿದ್ದು, ಒಬ್ಬನಿಗೆ ಹಾಸನಾಂಬ ದೇಗುಲದ ಕೆಲವು ಕಾಮಗಾರಿಗಳ ಗುತ್ತಿಗೆಯನ್ನು ನೀಡುತ್ತಿರುವುದು ಅಕ್ರಮ. ದೇವಸ್ಥಾನದ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ಹಾಕಿದ ಹಣದ ಅರ್ಧಕ್ಕಿಂತ ಹೆಚ್ಚು ಭಾಗ ಗುತ್ತಿಗೆದಾರನಿಗೇ ಪಾವತಿಯಾಗುತ್ತಿದೆ. ಇದರಲ್ಲಿ ಅಧಿಕಾರಿಗಳೂ ಭಾಗಿಯಾಗಿರುವ ಶಂಕೆ ಇದೆ. ಇದುವರೆಗೆ ಒಬ್ಬರಿಗೆ ನೀಡುತ್ತಿರುವ ಗುತ್ತಿಗೆಯನ್ನು ಬದಲಿಸಿ ಕಡಿಮೆ ಬಿಡ್‌ ಸಲ್ಲಿಸಿರುವ ಹಾಗೂ ಉತ್ತಮ ಸೌಲಭ್ಯ ಒದಗಿಸುವ ಅರ್ಹತೆ ಹೊಂದಿರುವ ಆಯಾ ಕೆಲಸಕ್ಕೆ ತಕ್ಕಂತೆ ಬೇರೆ ಬೇರೆ ಗುತ್ತಿಗೆದಾರರಿಗೆ ಟೆಂಡರ್‌ ನೀಡುವುದರ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಇದುವರೆಗೂ ನಡೆದಿರುವ ಗುತ್ತಿಗೆದಾರಿಕೆಯ ಅಕ್ರಮಗಳನ್ನು ಬಯಲಿಗೆ ತಂದು ಇದಕ್ಕೆ ಕಾರಣರಾದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next