ಉಡುಪಿ: ನಗರಸಭೆ ಆಡಳಿತ ಕಚೇರಿಯನ್ನು ಹಳೆ ತಾಲೂಕು ಕಚೇರಿ ಜಾಗದಲ್ಲಿ ನೂತನವಾಗಿ ನಿರ್ಮಿಸಲು ತಯಾರಿ ನಡೆಯುತ್ತಿದ್ದು, ಹಳೆ ತಾಲೂಕು ಕಚೇರಿ ಕಟ್ಟಡವನ್ನು ತೆರವುಗೊಳಿಸಲು ಟೆಂಡರ್ ಪ್ರಕ್ರಿಯೆ ಶುರುವಾಗಿದೆ.
ನಗರವು ದಿನೇದಿನೇ ಬೆಳೆಯುತ್ತಿದ್ದಂತೆ ನಗರಸಭೆ ಆಡಳಿತ ಕಚೇರಿ ಇಕ್ಕಟ್ಟಿನ ಸ್ವರೂಪ ಪಡೆಯುತ್ತಿದ್ದು ಸಮಸ್ಯೆಯಾಗುತ್ತಿತ್ತು. ಈ ನೆಲೆಯಲ್ಲಿ ನಗರಸಭೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಂದಾಯ ಇಲಾಖೆ ಸುಪರ್ದಿ ಯಲ್ಲಿದ್ದ ಹಳೆ ತಾ| ಕಚೇರಿ ಜಾಗ ಸರ್ವೇ ನಂಬರ್ 91/ಎ2ರಲ್ಲಿ 96 ಸೆಂಟ್ಸ್ ಜಮೀನನ್ನು ಮಂಜೂರು ಮಾಡಲಾಗಿದೆ.
ಹಳೆ ತಾ| ಕಚೇರಿ ಜಾಗ ಪ್ರಸ್ತುತ ನಿರುಪಯುಕ್ತ ವಾಗಿದ್ದು ಇದನ್ನು ಸದುಪಯೋಗಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಜನಪ್ರತಿನಿಧಿಗಳ ಬೇಡಿಕೆಯಂತೆ ನಗರಸಭೆ ಹೊಸ ಕಟ್ಟಡ ಕಟ್ಟಲು ಜಾಗದ ಮಂಜೂರಾತಿ ಪ್ರಯತ್ನ ಫಲ ನೀಡಿದೆ. ಹಳೆ ತಾ| ಕಚೇರಿ ಕಟ್ಟಡವನ್ನು ಕೆಡವಿ ವಾಣಿಜ್ಯ ಸಂಕೀರ್ಣ ಸಹಿತ ವ್ಯವಸ್ಥಿತವಾಗಿ, ವಿಶಾಲವಾದ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.
ಒಂದೂವರೆ ವರ್ಷದೊಳಗೆ ಪೂರ್ಣ
ನೂತನ ನಗರಸಭೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಕೆಲಸ ನಡೆಯುತ್ತಿದೆ. ಹಳೆ ಕಟ್ಟಡ ತೆರವು, ನೀಲ ನಕಾಶೆ, ಟೆಂಡರ್ ಪ್ರಕ್ರಿಯೆ, ಕಟ್ಟಡ ನಿರ್ಮಾಣ ಕಾಮಗಾರಿ ಸಹಿತ ಹಂತಹಂತವಾಗಿ ಒಂದೂವರೆ ವರ್ಷದೊಳಗೆ ಪೂರ್ಣಗೊಳ್ಳಬಹುದು. 30ರಿಂದ 35 ಕೋ.ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಅಂದಾಜಿಸಲಾಗುತ್ತಿದೆ. ನಗರಸಭೆಗೆ ಆದಾಯವು ದೊರೆಯುವಂತೆ ವಾಣಿಜ್ಯ ಮಳಿಗೆಗಳೂ ಕಟ್ಟಡದಲ್ಲಿ ಇರುತ್ತವೆ. ಪಾರ್ಕಿಂಗ್ ವ್ಯವಸ್ಥೆ, ಆಡಳಿತ ಕಚೇರಿ ಕಟ್ಟಡ, ಕಾನ್ಫರೆನ್ಸ್ ಹಾಲ್, ಮೀಟಿಂಗ್ ಹಾಲ್‌ಗಳು ಸುಸಜ್ಜಿತವಾಗಿ ನಿರ್ಮಾಣವಾಗಲಿವೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕೆ ಹಳೆ ತಾಲೂಕು ಕಚೇರಿ ಕಟ್ಟಡ ತೆರವು ಗೊಳಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಕಟ್ಟಡದ ಯೋಜನೆ ಕಾರ್ಯ ನಡೆಯು ತ್ತಿದೆ, ಇನ್ನೂ ಅಂತಿಮಗೊಂಡಿಲ್ಲ. ಒಂದೂವರೆ ವರ್ಷದೊಳಗೆ ನೂತನ ಕಟ್ಟಡ ನಿರ್ಮಾಣ ಕೆಲಸ ಮುಗಿಯಲಿದೆ.
– ಡಾ| ಉದಯ ಕುಮಾರ್ ಶೆಟ್ಟಿ, ಪೌರಾಯುಕ್ತ, ನಗರಸಭೆ