Advertisement

ತೆನಾಲಿರಾಮನ ಪತ್ತೇದಾರಿಕೆ!

06:20 AM Aug 17, 2017 | Harsha Rao |

ಶ್ರೀಕೃಷ್ಣದೇವರಾಯ ಅಮೂಲ್ಯ ರತ್ನಗಳಿಂದ ತಯಾರಿಸಿದ ಉಂಗುರವನ್ನು ಧರಿಸುತ್ತಿದ್ದ. ಒಂದು ದಿನ ಅದು ಕಳೆದು ಹೋಯಿತು. ಅವನ ಅಂಗರಕ್ಷಕರಲ್ಲಿ ಒಬ್ಬರು ಕಳ್ಳತನ ಮಾಡಿರಬಹುದು ಎಂಬ ಅನುಮಾನದಿಂದ ತನ್ನ ಮಂತ್ರಿಯಾದ ತೆನಾಲಿರಾಮನನ್ನು ಕರೆಸಿದ. ಉಂಗುರವನ್ನು ಹುಡುಕಿಕೊಟ್ಟರೆ ಬಹುಮಾನ ಕೊಡುವೆನೆಂದೂ ಆಶ್ವಾಸನೆಯಿತ್ತ. ತೆನಾಲಿರಾಮ ಒಂದು ಉಪಾಯ ಹೂಡಿದ. ಅದರಂತೆ ತೆನಾಲಿರಾಮ ಹನ್ನೆರಡು ಅಂಗರಕ್ಷಕರನ್ನು ಒಂದು ಕತ್ತಲೆ ಕೋಣೆಗೆ ಕರೆದುಕೊಂಡು ಹೋಗಿ “ನೀವೆಲ್ಲರೂ ಒಬ್ಬೊಬ್ಬರಾಗಿ ಕಾಳಿಕಾ ದೇವಿಯ ಪಾದವನ್ನು ಮುಟ್ಟಿ ಬರಬೇಕು’ ಎಂದನು. ಅಂಗರಕ್ಷಕರೆಲ್ಲರೂ ಪ್ರಶ್ನಾರ್ಥಕವಾಗಿ ರಾಮನನ್ನು ನೋಡುತ್ತಿರಲು ಆತ ಹೇಳಿದ “ದೊರೆಗಳ ಉಂಗುರ ಕಳವಾಗಿದೆ. ಆ ಕಳ್ಳ ಕಾಳಿಕಾ ದೇವಿಯ ಪಾದಕ್ಕೆ ಮುಟ್ಟಿ ಬಂದರೆ ದೇವಿ ನನ‌ಗೆ ಕನಸಿನಲ್ಲಿ ಕಳ್ಳ ಯಾರು ಎಂದು ಹೇಳುತ್ತಾಳೆ’.

Advertisement

ಅಂಗರಕ್ಷಕರು ಒಬ್ಬೊಬ್ಬರಾಗಿ ದೇವಿಯ ಪಾದವನ್ನು ಮುಟ್ಟಿ ಬಂದರು. ಅವರೆಲ್ಲರನ್ನೂ ಸಾಲಾಗಿ ನಿಲ್ಲಿಸಿ ಕೈಗಳನ್ನು ಮುಂದಕ್ಕೆ ಚಾಚಲು ಹೇಳಿದ. ಹಾಗೆ ಹೇಳಿ ತಾನು ಅವರೆಲ್ಲರ ಕೈಗಳನ್ನು ಮೂಸಿ ನೋಡಿದ. ಎಲ್ಲರೂ ನಗುವುದೊಂದು ಬಾಕಿ, ಈ ತೆನಾಲಿ ರಾಮನಿಗೆ ಏನಾಗಿದೆ ಎಂದು. ರಾಮ ಪ್ರಭುಗಳ ಹತ್ತಿರ ಬಂದು “ಏಳನೆಯವನೇ ಕಳ್ಳ’ ಎಂದನು. ರಾಜ “ಅದು ಹೇಗೆ ಹೇಳುತ್ತೀ’ ಎಂದು ಪ್ರಶ್ನಿಸಿದಾಗ, ರಾಮ “ಪ್ರಭುಗಳೇ ನಾನು ದೇವಿಯ ಪಾದಗಳಿಗೆ ಸುಗಂಧ ದ್ರವ್ಯವನ್ನು ಹಚ್ಚಿದ್ದೆ. ಅದನ್ನು ಮುಟ್ಟಿದವರ ಕೈಗಳಿಗೆ ಆ ಸುಗಂಧ ಅಂಟಿಕೊಂಡಿತ್ತು. ಏಳನೆಯವನ ಕೈಗಳಿಗೆ ಮಾತ್ರ ಸುಗಂಧ ಅಂಟಿರಲಿಲ್ಲ. ಏಕೆಂದರೆ ದೇವಿ ಎಲ್ಲಿ ತನ್ನನ್ನು ಹಿಡಿದು ಕೊಡುವಳ್ಳೋ ಎಂಬ ಭಯದಿಂದ ಆತ ಮುಟ್ಟಿಯೇ ಇರಲಿಲ್ಲ’. ರಾಜ ರಾಮನ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಷ್ಟೇ ಅಲ್ಲದೆ ತಾನು ನುಡಿದಂತೆಯೇ ಬಂಗಾರದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟನು.

– ಆರೀಫ್ ವಾಲೀಕಾರ್‌, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next