Advertisement

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ

03:02 AM May 21, 2020 | Sriram |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಮುಂಜಾನೆ ಏರ್‌ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಶುಕ್ರವಾರಕ್ಕೆ 10 ವರ್ಷ ಪೂರ್ಣವಾಗುತ್ತದೆ. ದೇಶದ ನಾಗರಿಕ ವಿಮಾನಯಾನ ರಂಗದಲ್ಲಿಯೇ ಇದೊಂದು ಮರೆಯಲಾಗದ ದುರಂತ.

Advertisement

ದುರಂತದಲ್ಲಿ ಪೈಲಟ್‌, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ಆ ವಿಮಾನದಲ್ಲಿ ಒಟ್ಟು 135 ಮಂದಿ ವಯ ಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. 8 ಮಂದಿ ಬದುಕುಳಿದಿದ್ದರು. ಮೃತಪಟ್ಟವ ರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳದವರಿದ್ದರು.

ಆಗಿದ್ದೇನು?
ದುಬಾೖಯಿಂದ ಬಂದ ವಿಮಾನ ಎಲ್ಲ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ಇಳಿದಿತ್ತು. ಆದರೆ ರನ್‌ವೇಯಲ್ಲಿ ನಿಲ್ಲದೆ ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ಬಿತ್ತು. ಮುಖ್ಯ ಪೈಲಟ್‌ನ ನಿರ್ಲಕ್ಷ್ಯ, ಸಹ ಪೈಲಟ್‌ನ ಸಲಹೆ ಪಾಲಿಸದೆ ಇದ್ದದ್ದೇ ಈ ದುರ್ಘ‌ಟನೆಗೆ ಕಾರಣ ಎಂದು ಬಳಿಕ ತನಿಖೆಯಲ್ಲಿ ತಿಳಿದುಬಂತು.

ಬಹುತೇಕ ಶವಗಳು ಸುಟ್ಟುಕರಕಲಾಗಿದ್ದ ಕಾರಣ ಗುರುತು ಪತ್ತೆ ಅಸಾಧ್ಯವಾಗಿತ್ತು. ಕರಾವಳಿಯಾದ್ಯಂತದ ವಿವಿಧ ಸ್ವಯಂ ಸೇವಾ ಸಂಘಟನೆಗಳು ಈ ಸಂದರ್ಭ ಕೂಡಲೇ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದವು.

2010ರಲ್ಲಿ ಸಂಭವಿಸಿದ ದುರ್ಘ‌ಟನೆಯಲ್ಲಿ ಬದುಕಿ ಉಳಿದವರ ಬಗ್ಗೆ ಸದ್ಯ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಏರ್‌ ಇಂಡಿಯಾ ದಲ್ಲಿ ಮಾಹಿತಿಯಿಲ್ಲ. ಯಾಕೆಂದರೆ ಅವರೆಲ್ಲರೂ ಸಣ್ಣಪುಟ್ಟ ಗಾಯಗ ಳೊಂದಿಗೆ ಕೆಲವೇ ದಿನ ಗಳಲ್ಲಿ ಚೇತರಿಸಿಕೊಂದ್ದರು. ಅವರ ಪರಿಹಾರ ಪ್ರಕ್ರಿಯೆಯೂ ಒಂದೆರಡು ವರ್ಷದೊಳಗೆ ಮುಗಿದಿತ್ತು. ಮೃತರ ಬಗ್ಗೆ ಮಾತ್ರ ವಿಶೇಷ ಒತ್ತು ನೀಡಿ ಎಲ್ಲ ಇಲಾಖೆಗಳು ಸ್ಪಂದಿಸುತ್ತಿವೆ ಎಂಬುದು ಜಿಲ್ಲಾಡಳಿತದ ಅಭಿಪ್ರಾಯ.

Advertisement

“ಸ್ಮಾರಕ ಪಾರ್ಕ್‌’ ನಿರ್ಮಾಣ
ದುರಂತ ಸಂಭವಿಸಿದ ಸ್ಥಳದಲ್ಲೇ ಮೃತರ ಹೆಸರುಗಳನ್ನು ಶಿಲೆಗಳಲ್ಲಿ ಬರೆದು ತಾತ್ಕಾಲಿಕ ಸ್ಮಾರಕ ನಿರ್ಮಿಸ ಲಾಗಿತ್ತು. ಆದರೆ ಆ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ವಿವಾದ ಉಂಟಾಗಿತ್ತು. ತಾತ್ಕಾಲಿಕ ಸ್ಮಾರಕವು  ಕಿಡಿಗೇಡಿಗಳಿಂದಾಗಿ ಪುಡಿಯಾಗಿತ್ತು. ಅಂತಿಮವಾಗಿ 2 ವರ್ಷದ ಹಿಂದೆ ಕೂಳೂರು ಸಮೀಪದ ತಣ್ಣೀರು ಬಾವಿಗೆ ತೆರಳುವ ರಸ್ತೆ ಪಕ್ಕದ 90 ಸೆಂಟ್ಸ್‌ ಜಾಗದಲ್ಲಿ 22/5 ಹೆಸರಿನಲ್ಲಿ “ಸ್ಮಾರಕ ಪಾರ್ಕ್‌’ ನಿರ್ಮಿಸಲಾಗಿದೆ. ಅಲ್ಲಿ ಪ್ರತೀ ವರ್ಷ ಮೇ 22ರಂದು ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತದೆ.

ಅಂದಿನ ಮೃತ್ಯುಂಜಯರು
ತಣ್ಣೀರುಬಾವಿಯ ಪ್ರದೀಪ್‌ (ಅಂದಿನ ಪ್ರಾಯ 28), ಹಂಪನ ಕಟ್ಟೆಯ ಮಹಮ್ಮದ್‌ ಉಸ್ಮಾನ್‌ (49), ವಾಮಂಜೂರಿನ ಜ್ಯೂಯೆಲ್‌ ಡಿ’ಸೋಜಾ (24), ಕೇರಳ ಕಣ್ಣೂರು ಕಂಬಿಲ್‌ನ ಮಾಹಿನ್‌ ಕುಟ್ಟಿ (49), ಕಾಸರಗೋಡು ಉದುಮ ಕುಲಿಕುನ್ನು ನಿವಾಸಿ ಕೃಷ್ಣನ್‌ (37), ಉಳ್ಳಾಲದ ಉಮ್ಮರ್‌ ಫಾರೂಕ್‌ (26), ಪುತ್ತೂರು ಸಾಮೆತ್ತಡ್ಕದ ಅಬ್ದುಲ್ಲಾ (37), ಮಂಗಳೂರು ಕೆಎಂಸಿ ವಿದ್ಯಾರ್ಥಿನಿ ಬಾಂಗ್ಲಾದ ಸಬ್ರಿನಾ (23) ಪವಾಡಸದೃಶರಾಗಿ ಬದುಕುಳಿದ ಅದೃಷ್ಟವಂತರು. ಇವರಲ್ಲಿ ಸಬ್ರಿನಾ ಮಾತ್ರ ಗಂಭೀರ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next