ದಾವಣಗೆರೆ: ರಾಜ್ಯದಲ್ಲಿ ಒಂದು ಲಕ್ಷದಷ್ಟು ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾದರೂ ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸರಕಾರ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ರಾಜ್ಯ ಸರಕಾರ 31 ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆ, ಆರು ಸಾವಿರ ಐಸೊಲೇಶನ್ ವಾರ್ಡ್, 10 ಸಾವಿರದಷ್ಟು ಐಸೊಲೇಶನ್ ಬೆಡ್ ಸಿದ್ಧಪಡಿಸಿಕೊಂಡಿದೆ. 150 ವೆಂಟಿಲೇಟರ್ ಖರೀದಿಸುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ದೃಢಪಟ್ಟ 258 ಪ್ರಕರಣಗಳಲ್ಲಿ ದಾವಣಗೆರೆ ಜಿಲ್ಲೆಯ ಮೂರು ಪ್ರಕರಣ ಒಳಗೊಂಡಂತೆ 65 ಜನ ಗುಣಮುಖರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಸಮರೋಪಾದಿಯಲ್ಲಿ ಕೈಗೊಂಡಿರುವ ಕ್ರಮಗಳಿಂದ ಕರ್ನಾಟಕ ಮೂರನೇ ಸ್ಥಾನದಿಂದ 12ನೇ ಸ್ಥಾನಕ್ಕಿಳಿದಿದೆ. ಈಗ ಅತೀ ವೇಗವಾಗಿ ಎರಡನೇ ಹಂತದ ಕ್ವಾರಂಟೈನ್ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮೇ 3ರ ವರೆಗೆ ಲಾಕ್‌ಡೌನ್ ವಿಸ್ತರಿಸುವ ಜತೆಗೆ ಸರ್ವರೂ ಸಪ್ತ ಸೂತ್ರ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದೇ ಕಟ್ಟುನಿಟ್ಟಾಗಿ ಲಾಕ್‌ಡೌನ್ ಪಾಲನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ಸೋಂಕು ತಡೆಯಲು ಲಾಕ್‌ಡೌನ್ ಜಾರಿಯಲ್ಲಿರುವಾಗಲೂ ಪ್ರವಾಸಕ್ಕೆ ತೆರಳುವುದು, ಮೋಜು-ಮಸ್ತಿಯಲ್ಲಿ ತೊಡಗಿದವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು.
– ಬಿ. ಶ್ರೀರಾಮುಲು, ಆರೋಗ್ಯ ಸಚಿವರು