Advertisement
ಇಲ್ಲಿ ಸುಮಾರು 150 ಮೀಟರ್ ಉದ್ದಕ್ಕೆ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ಇರಲಿಲ್ಲ. ಇಲ್ಲಿ ಮಳೆ ನೀರು ರಸ್ತೆ ಮೇಲೆಯೇ ನಿಲ್ಲುತ್ತಿತ್ತು. ಪರಿಣಾಮ ಪಾದಚಾರಿಗಳ ಮೇಲೆ ಕೆಂಪು ನೀರಿನ ಓಕುಳಿಯಾಗುತ್ತಿತ್ತು. ಬಸ್, ಲಾರಿ ಇಲ್ಲಿ ಸಂಚರಿಸುವಾಗ ದ್ವಿಚಕ್ರ, ತ್ರಿಚಕ್ರ ಮತ್ತಿತರ ಸಣ್ಣಪುಟ್ಟ ವಾಹನಗಳ ಮೇಲೆಯೂ ನೀರು, ಕೆಸರು ರಾಚುತ್ತಿತ್ತು. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಎಷ್ಟೋ ವರ್ಷಗಳಿಂದ ಇಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುತ್ತಿತ್ತು. ಇಲ್ಲಿ ಚರಂಡಿ ನಿರ್ಮಾಣವಾಗದೆ ಅನ್ಯ ಮಾರ್ಗವಿಲ್ಲ ಎಂಬುದನ್ನು ಮನಗಂಡು ಇದೀಗ ಲೋಕೋಪಯೋಗಿ ಇಲಾಖೆ ಒಂದು ಬದಿಯಲ್ಲಿ ತಾತ್ಕಾಲಿಕ ಚರಂಡಿ ನಿರ್ಮಿಸಿ ತಕ್ಕಮಟ್ಟಿಗೆ ಪರಿಹಾರ ಒದಗಿಸಿದೆ. ರಸ್ತೆಯ ಎರಡೂ ಬದಿಗಳಲ್ಲಿಯೂ ಚರಂಡಿ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸುವ ಆವಶ್ಯಕತೆ ಇದೆ.
ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಚರಂಡಿಗಳಲ್ಲಿ ಹೂಳು ತುಂಬಿದೆ. ವಿಟ್ಲ – ಪುತ್ತೂರು ರಸ್ತೆಯಲ್ಲಿ, ಮಂಗಳೂರು ರಸ್ತೆಯಲ್ಲಿ, ಸಾಲೆತ್ತೂರು ರಸ್ತೆಯಲ್ಲಿ, ಅರಮನೆ ರಸ್ತೆಯಲ್ಲಿ ಚರಂಡಿಯಲ್ಲಿ ನೀರು ಸಾಗುತ್ತಿಲ್ಲ. ನೀರು ರಸ್ತೆಯಲ್ಲೇ ಸಾಗುತ್ತಿರುವುದರಿಂದ ಕೆಸರು, ಮಣ್ಣು, ಕಸಕಡ್ಡಿಗಳು ತುಂಬಿ ಹೋಗುತ್ತಿವೆ ಎಂದು ನಾಗರಿಕರು ದೂರುತ್ತಿದ್ದಾರೆ. ಇದನ್ನು ಸ್ವತ್ಛಗೊಳಿಸುವುದೇ ಸಮಸ್ಯೆಯಾಗಿದೆ. ಇದನ್ನು ಮನಗಂಡು ಕೆಲವು ಕಡೆಗಳಲ್ಲಿ ಈಗ ಕಾಮಗಾರಿ ಪ್ರಾರಂಭಿಸಲಾಗಿದೆ. ವಿಟ್ಲ-ಮಂಗಳೂರು ರಸ್ತೆಯ ಬಲಭಾಗದಲ್ಲಿ ಹೂಳೆತ್ತಲಾಗುತ್ತಿದೆ. ದೇವಸ್ಥಾನ ರಸ್ತೆಯಲ್ಲಿ ನೀರು
ವಿಟ್ಲ ಜಂಕ್ಷನ್ ಬಳಿಯಿಂದ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆ ಮತ್ತು ವಿಟ್ಲ ದೂರವಾಣಿ ವಿನಿಮಯ ಕೇಂದ್ರ-ಅತಿಥಿಗೃಹ ರಸ್ತೆಗಳಲ್ಲಿ ಮಳೆ ಸುರಿಯುತ್ತಿದ್ದಂತೆ ಕೃತಕ ಪ್ರವಾಹ ಉಂಟಾಗುತ್ತದೆ. ಚರಂಡಿ ಎಲ್ಲಿ, ರಸ್ತೆ ಎಲ್ಲಿ ಎಂದು ಅರ್ಥವಾಗು ತ್ತಿಲ್ಲ. ಚರಂಡಿಯಲ್ಲಿ ಹೂಳು ತುಂಬಿ, ರಸ್ತೆಯೆತ್ತರಕ್ಕೇರಿದೆ. ಈ ಬಗ್ಗೆಯೂ ಪಟ್ಟಣ ಪಂಚಾಯತ್ ಕಾಮಗಾರಿ ಕೈಗೆತ್ತಿಕೊಳ್ಳಲಿದೆ ಎಂದು ಅಧ್ಯಕ್ಷ ಅರುಣ್ ಎಂ.ವಿಟ್ಲ “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
ಶಾಲೆ ರಸ್ತೆಯಲ್ಲಿ ಇದೇ ರೀತಿಯ ಸಮಸ್ಯೆಯಿದೆ. ಪೊಲೀಸ್ ಠಾಣೆಯಿಂದ ಮುಖ್ಯ ರಸ್ತೆಗೆ ಇಳಿಯುವ ನೀರಿಗೂ ಚರಂಡಿ ಸಿಗುತ್ತಿಲ್ಲ. ನೇರವಾಗಿ ಇವೆಲ್ಲವೂ ರಸ್ತೆಯಲ್ಲಿ ಸಾಗಿ, ಅಲ್ಲಿ ಇಲ್ಲಿ ತುಂಬಿಕೊಳ್ಳುತ್ತವೆ. ನಾಲ್ಕು ಮಾರ್ಗ ಸೇರುವ ಜಂಕ್ಷನ್‌ನಲ್ಲಿ ಚರಂಡಿ ಕಾಮಗಾರಿಯಾಗಿಲ್ಲ. ಪರಿಣಾಮವಾಗಿ ವಿಟ್ಲ ಪೇಟೆಯುದ್ದಕ್ಕೂ ಸಮಸ್ಯೆಗಳ ಆಗರ ಸೃಷ್ಟಿಯಾಗಿದೆ. ವಿದ್ಯುತ್ ಕಂಬಗಳ ಸ್ಥಳಾಂತರವಾಗದೆ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೂ ಅಡ್ಡಿಯಾಗಿದೆ. ಬುಧವಾರ ಕಂಬಗಳ ಸ್ಥಳಾಂತರವಾದ ಬಳಿಕ ಚರಂಡಿ ಕಾಮಗಾರಿಯನ್ನೂ ನಡೆಸಬಹುದು.
Advertisement
– ಉದಯಶಂಕರ್ ನೀರ್ಪಾಜೆ