ಹುಬ್ಬಳ್ಳಿ: ಜಿಲ್ಲಾಡಳಿತ, ಮಹಾನಗರ ಪಾಲಿಕೆ ಜಾರಿಗೆ ತಂದಿದ್ದ ಮನೆ-ಮನೆಗೆ ತರಾಕಾರಿ, ಹಣ್ಣು ತಲುಪಿಸುವ ಕಾರ್ಯ ಬಹುತೇಕ ಮೂಲೆ ಸೇರುತ್ತಿದ್ದು, ನಿಯಮ ಮೀರಿ ಸಣ್ಣಪುಟ್ಟ ತರಕಾರಿ ಸಂತೆಗಳು ತಲೆ ಎತ್ತುತ್ತಿವೆ. ಸಾಮಾಜಿಕ ಅಂತರ ಇನ್ನಿತರ ನಿಯಮಗಳ ಪಾಲನೆಯಂತೂ ದೂರದ ಮಾತು.
ಕೋವಿಡ್ 19 ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆ ಹಾಗೂ ವಾರದ ಸಂತೆಗಳಿಗೆ ನಿರ್ಬಂಧ ಹೇರಿ ಮನೆ-ಮನೆಗೆ ತರಕಾರಿ, ಹಣ್ಣು ತಲುಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿತ್ತು. ಪ್ರತಿ ವಾರ್ಡ್‌ಗೆ 9 ಜನರಂತೆ ಸುಮಾರು 900ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಪಾಸ್ ವ್ಯವಸ್ಥೆ ಮಾಡಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಇದು ನೇರವಾಗಿ ಬೀದಿಬದಿ ವ್ಯಾಪಾರಿಗಳ ಜೀವನ ನಿರ್ವಹಣೆ ಹಾಗೂ ಕಾಯಿಪಲ್ಯಕ್ಕಾಗಿ ಜನರ ಅಲೆದಾಟಕ್ಕೆ ಕಡಿವಾಣ ಹಾಕುವುದಾಗಿತ್ತು. ಇದೀಗ ಸಂಚಾರಿ ಮಾರುಕಟ್ಟೆ ವ್ಯವಸ್ಥೆ ಬಹುತೇಕ ಸ್ಥಗಿತಗೊಳ್ಳುತ್ತಿದ್ದು, ಕೆಲವಡೆ ಸಂತೆ ಮಾರುಕಟ್ಟೆಗಳು ತಲೆ ಎತ್ತುತ್ತಿವೆ. ಇದರಿಂದಾಗಿ ತಮ್ಮ ಪ್ರದೇಶಗಳಿಗೆ ತರಕಾರಿ, ಹಣ್ಣು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಜನರು ಇಂತಹ ತಾತ್ಕಾಲಿಕ ಮಾರುಕಟ್ಟೆಗಳನ್ನು ಹುಡುಕಿಕೊಂಡು ಹೋಗುವಂತಾಗಿದೆ.
ಬೆಳಗಿನ ಮಾರುಕಟ್ಟೆ: ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆಗೆ ಕಾರಣವಾಗುತ್ತಿದೆ. ಜನ ಸೇರುವಂತಹ ಸಂತೆ, ಮಾರುಕಟ್ಟೆಗೆ ಅವಕಾಶ ಇಲ್ಲದಿದ್ದರೂ ಬೆಳಗಿನ ಜಾವ ಇಂತಹ ಮಾರುಕಟ್ಟೆಗಳು ನಡೆಯುತ್ತಿವೆ. ಎಪಿಎಂಸಿ, ಸುತ್ತಲಿನ ರೈತರು ನೇರವಾಗಿ ಇಂತಹ ಸ್ಥಳಗಳಿಗೆ ಬಂದು ವ್ಯಾಪಾರಕ್ಕೆ ಕುಳಿತುಕೊಳ್ಳುತ್ತಿದ್ದಾರೆ. ಬೆಳಗ್ಗೆ ಸುಮಾರು 6:30ಗಂಟೆಯಿಂದಲೇ ಈ ಮಾರುಕಟ್ಟೆಗಳು ಆರಂಭವಾಗುತ್ತವೆ. ಒಂದೊಂದು ಸ್ಥಳದಲ್ಲಿ ಏಳೆಂಟು ವ್ಯಾಪಾರಿಗಳು ಕುಳಿತು ವ್ಯಾಪಾರ ಮಾಡುವುದು ಹೆಚ್ಚಾಗುತ್ತಿದೆ. ಈ ತರಹದ ಪ್ರದೇಶದಲ್ಲಿ ತರಕಾರಿ ದರ ಒಂದಿಷ್ಟು ಕಡಿಮೆ ಎನ್ನುವ ಕಾರಣಕ್ಕೆ ಜನರು ಎಲ್ಲಿಂದಲೋ ಈ ಮಾರುಕಟ್ಟೆಗಳಿಗೆ ಬರುತ್ತಿದ್ದಾರೆ.
ನಿಯಮಗಳ ಉಲ್ಲಂಘನೆ: ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಬೆಳಗಿನ ಸಂದರ್ಭದಲ್ಲಿ ಯಾರು ಕೇಳುತ್ತಾರೆ ಎನ್ನುವ ಉಡಾಫೆಯಿಂದ ಬಹುತೇಕರು ಮಾಸ್ಕ್ ಧರಿಸದೆ ಈ ಮಾರುಕಟ್ಟೆಗೆ ಬರುತ್ತಿದ್ದಾರೆ. ಇನ್ನೂ ಗುಂಪಾಗಿಯೇ ಜನರು ವ್ಯಾಪಾರ ಮಾಡುತ್ತಿರುವುದು ಆತಂಕದ ವಿಷಯವಾಗಿದೆ. ಶಾಂತಿನಗರದ ಪಕ್ಕದಲ್ಲಿರುವ ವೆಂಕಟೇಶ ಕಾಲೋನಿಯ ಎರಡು ಮೂರು ಕಡೆ ಬೆಳಗಿನ ಜಾವ ಈ ವ್ಯಾಪಾರ ನಡೆಯುತ್ತಿದೆ. ಇನ್ನೂ ದುರ್ಗದ ಬಯಲು ವ್ಯಾಪ್ತಿಯ ಬೆಳಂಕರ ಗಲ್ಲಿ, ಗೌಳಿ ಗಲ್ಲಿ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ತಾತ್ಕಾಲಿಕ ಸಂತೆ ಮಾರುಕಟ್ಟೆಗಳು ಆರಂಭವಾಗುತ್ತಿವೆ. ಸೋಂಕಿನ ಭೀತಿ: ಆರಂಭದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿ ಪ್ರಾಯೋಗಿಕವಾಗಿ ಕೆಲವಡೆ ಆರಂಭಿಸಲಾಯಿತು. ಆದರೆ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಸುರಕ್ಷಿತಾ ಕ್ರಮಗಳನ್ನು ಅನುಸರಿಸದ ಹಿನ್ನೆಲೆಯಲ್ಲಿ ಇದನ್ನು ಸ್ಥಗಿತಗೊಳಿಸಿ ಮನೆ-ಮನೆಗ ತಲುಪಿಸುವ ಕಾರ್ಯವನ್ನು ಅಂತಿಮಗೊಳಿಸಿತ್ತು.
ಆದರೆ ಇದೀಗ ತರಕಾರಿ, ಹಣ್ಣು ಕೊಂಚ ಕಡಿಮೆ ದರದಲ್ಲಿ ದೊರೆಯುವುದರಿಂದ ಸುತ್ತಲಿನ ಜನರಿಗೆ ಇದು ಅನುಕೂಲವಾಗಿದೆ. ಆದರೆ ಜನ ಸೇರುತ್ತಿರುವುದರಿಂದ ಬೀದಿಯಲ್ಲಿ ಜನರಿಗೆ ಪ್ರಾಣ ಸಂಕಟವಾಗಿ ಪರಿಣಮಿಸಿದೆ. ಎಲ್ಲಿಂದಲೂ ಜನರು ಬರುತ್ತಿರುವುದರಿಂದ ಸೋಂಕು ಹರಡುತ್ತಿದೆಯಾ ಎನ್ನುವ ಭಯ ಜನರಲ್ಲಿ ಮೂಡಿಸಿದೆ.
ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ ಇದಕ್ಕೆ ಪೊಲೀಸರು ಅವಕಾಶ ನೀಡದೆ ವ್ಯಾಪಾರಿಗಳನ್ನು ಚದುರಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ. ಆದರೆ ಬೆಳಗಿನ ಜಾವ ಪೊಲೀಸರ ಓಡಾಟ ಇರುವುದಿಲ್ಲ ಎನ್ನುವ ಕಾರಣಕ್ಕೆ ತಾತ್ಕಾಲಿಕ ಸಂತೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಈ ಕುರಿತು ಪಾಲಿಕೆಯೂ ಕೂಡ ಎಚ್ಚೆತ್ತುಕೊಂಡು ಸದ್ಯದ ಪರಿಸ್ಥಿತಿಯಲ್ಲಿ ಒಂದೇ ಕಡೆ ಜಮಾಯಿಸಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಪಕ್ಕದ ಶಾಂತಿ ನಗರದಲ್ಲಿ ಕೋವಿಡ್ 19 ಸೋಂಕಿತ ಪ್ರಕರಣವಿದೆ. ಆ ವ್ಯಕ್ತಿ ಸಾಕಷ್ಟು ಕಡೆ ಓಡಾಡಿದ್ದಾರೆ ಎನ್ನಲಾಗಿದೆ. ಹೀಗಿರುವಾಗ ಕೆಲ ವ್ಯಾಪಾರಿಗಳು ಬೆಳಗ್ಗಿನಿಂದ ವ್ಯಾಪಾರಕ್ಕೆ ಕುಳಿತುಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ಸೇರುತ್ತಿದ್ದಾರೆ. ಎಲ್ಲಿಂದಲೂ ಜನರು ತರಕಾರಿ ಖರೀದಿಗೆ ಬರುತ್ತಿದ್ದಾರೆ. ಯಾವುದೇ ಆತಂಕವಿಲ್ಲದೆ ಜೀವನ ನಡೆಸುತ್ತಿರುವ ನಮಗೆ ಈ ಸಂತೆ ಭಯ ತರಿಸಿದೆ. –
ಪವನ ಸುಣಗಾರ, ವೆಂಕಟೇಶ್ವರ ಕಾಲೋನಿ ನಿವಾಸಿ
ಬೆಳಗಿನ ಜಾವ ಒಂದಿಷ್ಟು ಕುಳಿತು ಮಾರಾಟ ಮಾಡುತ್ತೇವೆ. ನಂತರ ನಮಗೆ ನೀಡಿರುವ ವಾರ್ಡ್‌ಗಳಿಗೆ ವಾಹನಗಳ ಮೂಲಕ ಸಂಚಾರ ಮಾಡಿ ತರಕಾರಿ ವ್ಯಾಪಾರ ಮಾಡುತ್ತೇವೆ. ಖರೀದಿಸಿರುವ ತರಕಾರಿ ಉಳಿದು ಮೈಮೇಲೆ ಬರಬಾರದು ಎನ್ನುವ ಕಾರಣಕ್ಕೆ ಎರಡು ಕಡೆ ಮಾರಾಟ ಮಾಡುತ್ತಿದ್ದೇವೆ. ಇಡೀ ಕುಟುಂಬ ಇದರ ಮೇಲೆ ನಡೆಯಬೇಕು. –
ಅಬ್ದುಲ್ ರಿಜವಾನ್, ತರಕಾರಿ ವ್ಯಾಪಾರಿ
-ಹೇಮರಡ್ಡಿ ಸೈದಾಪುರ