Advertisement
ಬೆಳಕು ಚೆಲ್ಲಿದ ವರದಿಕಳತ್ತೂರು – ಗುರ್ಮೆ – ಪೈಯ್ನಾರು – ಬೆಳಪು ನಡುವಿನ ಪ್ರಧಾನ ಸಂಪರ್ಕ ಸೇತುವಾಗಿರುವ ಗುರ್ಮೆ ಸೇತುವೆಯ ಪಿಲ್ಲರ್ ನ ಅಡಿಪಾಯ ಕುಸಿದು ಸೇತುವೆ ಮೇಲಿನ ಸಂಚಾರಕ್ಕೆ ಅಪಾಯವುಂಟಾಗಿರುವ ಬಗ್ಗೆ ಉದಯವಾಣಿಯಲ್ಲಿ ಸಚಿತ್ರ ಲೇಖನ ಪ್ರಕಟವಾಗಿತ್ತು. ವರದಿ ಪ್ರಕಟಗೊಂಡ ಬಳಿಕ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಜಿ. ಸುವರ್ಣ ಅವರು ಸೋಮವಾರ ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಸೂಚನೆ ನೀಡಿದ್ದರು.
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ, ತುರ್ತಾಗಿ ಮರಳು ಚೀಲಗಳನ್ನು ಇರಿಸಿ ಸೇತುವೆ ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ ಮಂಗಳವಾರದಿಂದಲೇ ಮರಳು ಚೀಲ ಅಳವಡಿಕೆ ಕಾಮಗಾರಿ ಆರಂಭಿಸಿದ್ದು, ಹತ್ತು ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಕುತ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ ಕಾಮಗಾರಿಯನ್ನು ಪರಿಶೀಲಿಸಿದರು.
Related Articles
ಗುರ್ಮೆ ಹೊಳೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ತಡೆಯುಂಟು ಮಾಡುತ್ತಿದ್ದ ಬೃಹತ್ ಮರ ತೆರವುಗೊಳಿಸಲು ಅರಣ್ಯ ಇಲಾಖೆಯೂ ಮುಂದಾಗಿದೆ. ಮಂಗಳವಾರ ಬೆಳಗ್ಗಿನಿಂದಲೇ ಹೊಳೆಯಲ್ಲಿ ಅಡ್ಡಲಾಗಿ ಬಿದ್ದಿರುವ ಮರಗಳ ತೆರವು ಕಾಮಗಾರಿಗೆ ಚಾಲನೆ ನೀಡಿದ್ದು ಹೊಳೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಬೇಕಾಗುವ ವ್ಯವಸ್ಥೆ ಮಾಡಿಕೊಡುವುದಾಗಿ ಅರಣ್ಯ ಇಲಾಖೆ ಸಿಬಂದಿ ತಿಳಿಸಿದ್ದಾರೆ.
Advertisement