ಜೈಪುರ: ರಾಜಸ್ಥಾನ ರಾಜಕೀಯ ದಿನದಿಂದ ದಿನಕ್ಕೆ ಹೊಸ ಹೊಸ ಬಣ್ಣ ಪಡೆಯುತ್ತಿದೆ. ಸ್ಪೀಕರ್ ನೀಡಿರುವ ಅನರ್ಹತೆ ನೋಟೀಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ ಬಂಡಾಯ ಶಾಸಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿದೆ. ಅಲ್ಲಿಯವರೆಗೆ ಈ ಶಾಸಕರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು ಎಂದು ಸ್ಪೀಕರ್ ಸಿ.ಪಿ ಜೋಶಿಯವರಿಗೆ ಕೋರ್ಟ್ ಸೂಚಿಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿ ವಿಪ್ ಉಲ್ಲಂಘಿಸಿದ್ದ ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಸಿ. ಪಿ. ಜೋಶಿ ಅವರು ನೋಟಿಸ್ ನೀಡಿದ್ದು, ಇದನ್ನು ಪ್ರಶ್ನಿಸಿ ಪೈಲಟ್ ಬಣ ಹೈಕೋರ್ಟ್ ಮೆಟ್ಟಿಲೇರಿದೆ.
ಸಚಿನ್ ಪೈಲಟ್ ಪರ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದ್ದು, ಶಾಸಕರ ವಿರುದ್ಧ ಅನರ್ಹತೆಯ ನೋಟಿಸ್ ಜಾರಿಮಾಡುವ ಮೊದಲು ಸ್ಪೀಕರ್ ತಲೆಗೆ ಕೆಲಸ ಕೊಟ್ಟಂತೆ ಕಾಣುತ್ತಿಲ್ಲ ಎಂದು ವಾದಿಸಿದ್ದಾರೆ.
ಸಚಿನ್ ಪೈಲಟ್ ಬಣದ ಪರ ಮುಕುಲ್ ರೊಹಟಗಿ ಮತ್ತು ಹರೀಶ್ ಸಾಳ್ವೆ ವಾದ ಮಂಡಿಸಿದರೆ, ಕಾಂಗ್ರೆಸ್ ಪರ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದಾರೆ.