ಕಾಪು : ಕಳೆದ ವರ್ಷ ಭಾರೀ ಮಳೆ ಮತ್ತು ನೆರೆಯ ಕಾರಣದಿಂದಾಗಿ ಬಿರುಕು ಬಿಟ್ಟಿದ್ದ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಭಟ್ರತೋಟ ಸೇತುವೆಯ ಮರು ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದ್ದು, ಮಳೆಗಾಲದಲ್ಲಿ ಜನರ ಉಪಯೋಗಕ್ಕಾಗಿ ನಡೆದಾಡುವ ತಾತ್ಕಾಲಿಕ ಸೇತುವೆ ನಿರ್ಮಿಸಿ ಕೊಡುವ ಮೂಲಕ ಪುರಸಭೆ ಜನರ ಬೇಡಿಕೆಗೆ ಸ್ಪಂಧಿಸುವ ಪ್ರಯತ್ನ ಮಾಡಿದೆ.
ನೂರಾರು ಮನೆಗಳಿಗೆ ಆಧಾರ ಕೊಂಡಿ
ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಭಟ್ರತೋಟ ಸೇತುವೆಯು ಪಾಂಗಾಳ – ಮಟ್ಟು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಸುಮಾರು 150ಕ್ಕೂ ಅಧಿಕ ಮನೆಗಳ ಜನತೆ ಇದನ್ನೇ ಪ್ರಧಾನ ಸಂಪರ್ಕ ಸೇತುವಾಗಿ ಬಳಸುತ್ತಿದ್ದರು. ಕರಾವಳಿ ತೀರ ಮತ್ತು ಮೀನುಗಾರಿಕೆಗೆ ತೆರಳುವ ಜನರು ಕೂಡಾ ಈ ಸೇತುವೆಯ ಮೂಲಕವೇ ತಮ್ಮ ನಿತ್ಯದ ಕೆಲಸ ಕಾರ್ಯಗಳಿಗಾಗಿ ತೆರಳುತ್ತಿದ್ದರು.
ಸಂಚಾರ ನಿಷೇಧಿಸಿ ಒಂದು ವರ್ಷ
1996ರಲ್ಲಿ ನಿರ್ಮಾಣಗೊಂಡಿದ್ದ ಕೈಪುಂಜಾಲು ಭಟ್ರತೋಟ ಸೇತುವೆಯು ಶಿಥಿಲಗೊಂಡಿದ್ದು, ಕಳೆದ ವರ್ಷದ ಭಾರೀ ಮಳೆಗೆ ಸೇತುವೆಯ 2, 3 ಮತ್ತು 4ನೇ ಸ್ಲಾ ್ಯಬ್ ಬಿರುಕು ಬಿಟ್ಟಿತ್ತು. ಮಧ್ಯದ ಪಿಲ್ಲರ್ ಭೂಮಿಯೊಳಗೆ ಕುಸಿದಿದ್ದ ಪರಿಣಾಮ ಅಂದಿನ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ, ಸೇತುವೆಯ ಮೇಲಿನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.
ಭಟ್ರತೋಟ ಸೇತುವೆಯನ್ನು ಶಾಲಾ ಮಕ್ಕಳು, ಸಾರ್ವಜನಿಕರು, ಕೃಷಿಕರು ತಮ್ಮ ದೈನಂದಿನ ಕೆಲಸ ಕಾರ್ಯ ಚಟುವಟಿಕೆಗಳಿಗಾಗಿ ಉಪಯೋಗಿಸಬಹುದಾಗಿದೆ.ಇಲ್ಲಿ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿರುವುದಿಲ್ಲ. ಮಕ್ಕಳು ಸೇತುವೆಯಲ್ಲಿ ಓಡಾಡುವಾಗ ಹಿರಿಯರು ಮತ್ತು ಸ್ಥಳೀಯರು ಸಹಕರಿಸುವಂತೆ ಮನವಿ ಮಾಡಲಾಗಿದೆ.