Advertisement

ಕೆ.ಸಿ ವ್ಯಾಲಿ ಯೋಜನೆಗೆ ತಾತ್ಕಾಲಿಕ ಬ್ರೇಕ್‌

12:03 PM Jul 25, 2018 | Team Udayavani |

ಬೆಂಗಳೂರು: ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕೆಸಿ ವ್ಯಾಲಿ ಯೋಜನೆಗೆ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ.

Advertisement

ಸಂಸ್ಕರಿತ ಕೊಳಚೆ ನೀರಿನ ಗುಣಮಟ್ಟ ಖಾತರಿಯಾಗುವವರೆಗೂ ಕೆರೆಗಳಿಗೆ ನೀರು ಹರಿಸಬೇಡಿ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಇದರಿಂದಾಗಿ 1,280 ಕೋಟಿ ರೂ.ಯೋಜನೆ ತಕ್ಷಣಕ್ಕೆ ಸ್ಥಗಿತಗೊಂಡಂತಾಗಿದೆ.

 ಇತ್ತೀಚೆಗೆ ಕೋಲಾರದ ಲಕ್ಷ್ಮಿ ಸಾಗರ ಸೇರಿದಂತೆ ಇತರ ಕೆರೆಗಳಿಗೆ ಕೆಸಿ ವ್ಯಾಲಿಯಿಂದ ಹರಿದ ನೀರಿನಲ್ಲಿ ನೊರೆ ಕಾಣಿಸಿಕೊಂಡು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸದೆ ನೀರು ಹರಿಸುತ್ತಿರುವುದರಿಂದಲೇ ನೊರೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಕೆ.ಸಿ ವ್ಯಾಲಿಯಿಂದ ಸಂಸ್ಕರಿಸಿದ ನೀರಿನ ಗುಣಮಟ್ಟ ಪರಿಶೀಲಿಸದೆ, ಅವೈಜ್ಞಾನಿಕ ರೀತಿಯಲ್ಲಿ ನೀರು ಹರಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿಯವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್‌ .ದೇವದಾಸ್‌ ಅವರಿದ್ದ ವಿಭಾಗೀಯ ಪೀಠ, ಈ ಮಧ್ಯಂತರ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪ್ರಿನ್ಸ್‌ ಐಸೆಕ್‌ ವಾದ ಮಂಡಿಸಿ, ಸಂಸ್ಕರಿಸಿದ ತ್ಯಾಜ್ಯ ನೀರಿನ ಗುಣಮಟ್ಟ ಪರಿಶೀಲಿಸದೆ ಮೂರು ಜಿಲ್ಲೆಗಳ ಕೆರೆಗಳಿಗೆ ನೀರು ಬಿಡಲಾಗುತ್ತಿದೆ. ಇದು 59 ಲಕ್ಷ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ, ಇತ್ತೀಚೆಗೆ ನೀರಿನ ಗುಣಮಟ್ಟದ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿಯೂ ಹಲವು ಗೊಂದಲಗಳಿವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Advertisement

ಈ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನವೇ ಪರಿಣಾಮಗಳ ಬಗ್ಗೆ ಅವಲೋಕಿಸಿ ನೀರು ಹರಿಸಲಾಗುತ್ತಿದೆ. ಕೆರೆಗಳ ಅಂತರ್ಜಲ ವೃದ್ಧಿಸುವ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆಯನ್ನು ತರಲಾಗಿದೆ. ಕುಡಿಯಲು ಹಾಗೂ ಕೃಷಿ ಉದ್ದೇಶಗಳಿಗಾಗಿ ಅಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಭೂಮಿಯೊಳಗಡೆ ಶುದ್ಧ ಹಾಗೂ ತ್ಯಾಜ್ಯ ನೀರನ್ನು ಹೇಗೆ ಪ್ರತ್ಯೇಕಿಸುತ್ತೀರಿ? ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ಸಂಸ್ಕರಿಸಿದ ನೀರಿನ ಗುಣಮಟ್ಟ ಖಾತ್ರಿಯಾಗುವ ತನಕ ನೀರು ಹರಿಸಬಾರದು ಎಂದು ಮಧ್ಯಂತರ ಆದೇಶ ನೀಡಿ ಆಗಸ್ಟ್‌ 6ಕ್ಕೆ ವಿಚಾರಣೆ ಮುಂದೂಡಿತು.

ಅರ್ಜಿದಾರರ ಆಕ್ಷೇಪಣೆಗಳೇನು?: ಕೆ.ಸಿ ವ್ಯಾಲಿಯಲ್ಲಿ ರಾಸಾಯನಿಕ ಯುಕ್ತ ಹಾಗೂ ಕಾರ್ಖಾನೆಗಳ ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರೀಕ್ಷಿಸಿಲ್ಲ. ಮೂರನೇ ಹಂತದಲ್ಲಿ ಸಂಸ್ಕರಿಸಿದ ಬಳಿಕವಷ್ಟೇ ನೀರು ಹರಿಸಬಹುದು ಎಂದು ಐಐಎಸ್ಸಿ ತಜ್ಞರು ಅಭಿಪ್ರಾಯಪಟ್ಟಿದ್ದರು. ಹೀಗಿದ್ದರೂ, ಅವೈಜ್ಞಾನಿಕ ಮಾದರಿಯಲ್ಲಿ ಕೆರೆಗಳಿಗೆ ನೀರು ಹರಿಸುತ್ತಿರುವುದರಿಂದ ಉಭಯ ಜಿಲ್ಲೆಗಳ ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ಅರ್ಜಿದಾರರ ವಾದವಾಗಿದೆ.

ಯೋಜನೆ ಹಿನ್ನೆಲೆ: ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳ ಅಂತರ್ಜಲ ಮಟ್ಟ ವೃದ್ಧಿಸುವ ಉದ್ದೇಶದಿಂದ ಮೂರು ಜಿಲ್ಲೆಗಳ ಒಟ್ಟು 163 ಕೆರೆಗಳಿಗೆ ಹೆಬ್ಟಾಳ-ನಾಗವಾರ ಕೆರೆಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸುವ 1,280 ಕೋಟಿ ರೂ.ವೆಚ್ಚದ ಕೆ.ಸಿ ವ್ಯಾಲಿ ಯೋಜನೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರ 2016ರ ಮೇ 30ರಂದು ಶಂಕುಸ್ಥಾಪನೆ ನೆರವೇರಿಸಿತ್ತು. ಜೂನ್‌ 2ರಿಂದ  ಪ್ರತಿನಿತ್ಯ 10 ಕೋಟಿ ಲೀಟರ್‌ ನೀರನ್ನು ಕೆರೆಗಳಿಗೆ ಬಿಡಲಾಗುತ್ತಿದೆ.

ಬೆಳ್ಳಂದೂರು ಕೆರೆ ಮಾದರಿಯಲ್ಲಿ ನೊರೆ…: ಕೆ.ಸಿ ವ್ಯಾಲಿಯಿಂದ ಸಂಸ್ಕರಿಸಿದ ತ್ಯಾಜ್ಯ ನೀರು ಬರುವ ಕೋಲಾರ ಜಿಲ್ಲೆಯ ಲಕ್ಷ್ಮೀ ಸಾಗರ, ಜೋಡಿ ಕೃಷ್ಣಾಪುರ, ನರಸಾಪುರ ಕೆರೆಗಳಲ್ಲಿ ನೊರೆ ಕಾಣಿಸಿಕೊಂಡಿತ್ತು. ಸರಿಯಾಗಿ ಸಂಸ್ಕರಿಸಿದೆ ರಾಸಾಯನಿಕಯುಕ್ತ ನೀರು ಹರಿಸುತ್ತಿರುವುದರಿಂದಲೇ ನೊರೆ ಕಾಣಿಸಿಕೊಂಡಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿ ಹಲವು ಸಂಘಟನೆಗಳು ಆರೋಪಿಸಿ ಪ್ರತಿಭಟನೆ ನಡೆಸಿದ್ದವು.  ಪ್ರತಿನಿತ್ಯ ಹರಿಸುತ್ತಿದ್ದ 100 ಎಂಎಲ್‌ಡಿ ನೀರಿನ ಪ್ರಮಾಣವನ್ನು 180 ಎಂಎಲ್‌ಡಿಗೆ ಹೆಚ್ಚಿಸಿದ್ದು, ಜೊತೆಗೆ, ಮಳೆಯ ಕಾರಣ ನೀರು ಹೆಚ್ಚಾಗಿದ್ದರಿಂದ ನೊರೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ನೊರೆ ಕಾಣಿಸಿಕೊಂಡ ಕೆರೆಗಳಿಗೆ ಭೇಟಿ: ಈ ಮಧ್ಯೆ, ಕೆ.ಸಿ.ವ್ಯಾಲಿಯಿಂದ ಕೋಲಾರ ಕೆರೆಗಳಿಗೆ ನೊರೆ ಮಿಶ್ರಿತ ನೀರು ಹರಿದು ಹೋದ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮುಖ್ಯಮಂತ್ರಿಗೆ ವರದಿ ನೀಡುವುದಾಗಿ ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಹೇಳಿದ್ದಾರೆ.

ಕಳೆದ ವಾರ ಮಳೆ ಜೋರಾಗಿ ಸುರಿದ ಕಾರಣ ಕಾಲುವೆಗಳ ತಡೆ ಗೋಡೆ ಕುಸಿದು ಕಲುಷಿತ ನೀರು ಕೋಲಾರದ ಕೆರೆಗಳಿಗೆ ಹೋಗಿದೆ. ಕುಸಿದಿರುವ ಗೋಡೆಗಳನ್ನು ದುರಸ್ಥಿಗೊಳಿಸಲು ಸೂಚಿಸಲಾಗಿದೆ. ಹೈಕೋರ್ಟ್‌ ಕೂಡ ಈ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ನಾನೇ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತೇನೆ ಎಂದರು.

 ಈಗಾಗಲೇ ಎರಡು ಹಂತದಲ್ಲಿ ನೀರು ಸಂಸ್ಕರಿಸಿ ಕೆರೆಗೆ ಬಿಡಲಾಗುತ್ತಿದೆ. ಈಗ ಬಿಡುತ್ತಿರುವ ನೀರು ಶುದ್ಧವಾಗಿದೆ ಎಂದು ವಿಜ್ಞಾನಿಗಳು ಮತ್ತು ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದಾರೆ. ಮೂರನೇ ಹಂತದ ಸಂಸ್ಕರಿತ ಘಟಕ ಸ್ಥಾಪಿಸಬೇಕಾ ಎಂಬುದನ್ನು ಸ್ಥಳ ಪರಿಶೀಲನೆ ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಹೈಕೋರ್ಟ್‌ ಆದೇಶವನ್ನು ಬಿಜೆಪಿ ಸ್ವಾಗತಿಸುತ್ತದೆ. ಪಕ್ಷದ ವತಿಯಿಂದ ಕೈಗೊಂಡ ಹೋರಾಟದ ಫ‌ಲವಿದು. ಕೆ.ಸಿ ವ್ಯಾಲಿಗೆ ಇದುವರೆಗೂ 947 ಕೋಟಿ ರೂ.ಖರ್ಚಾಗಿದೆ. ಕೊಳಚೆ ನೀರು ಸಂಸ್ಕರಣ ಘಟಕ ಅಳವಡಿಸಿ ನಂತರ ಕೆರೆಗಳಿಗೆ ನೀರು ಹರಿಸಬೇಕಿತ್ತು. ಆದರೆ, ಎಸ್‌ಟಿಪಿ ಸ್ಥಾಪನೆಯನ್ನು ಜಲಮಂಡಳಿಗೆ ವಹಿಸಿರುವುದರಿಂದ ಈ ರೀತಿ ಅವ್ಯವಸ್ಥೆಯಾಗಿದ್ದು, ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಸಾಧ್ಯತೆಯಿದೆ. ತೃತೀಯ ಹಂತದ ಸಂಸ್ಕರಣೆ ಬಳಿಕವಷ್ಟೇ ನೀರು ಹರಿಸಬೇಕು. 
-ವೈ.ಎ. ನಾರಾಯಣಸ್ವಾಮಿ, ವಿಧಾನಪರಿಷತ್‌ ಸದಸ್ಯ.

ಕೋಲಾರಕ್ಕೆ ಕೊಳಚೆ ನೀರು ಹರಿಸಿ ಈಗಾಗಲೇ ಸಾಕಷ್ಟು ಬೆಳೆ ಹಾನಿಯಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಸಿದ ಕೋಲಾರದ ಜನರಿಗೆ ಕೊಳಚೆ ನೀರು ಹರಿಸಿ ಪಾಪದ ಕೆಲಸ ಮಾಡಬೇಡಿ. ಯೋಜನೆಯಲ್ಲಿ ಭಾರೀ ಗೋಲ್‌ಮಾಲ್‌ ನಡೆದಿರುವ ಶಂಕೆಯಿದ್ದು, ಯೋಜನಾ ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.
-ಎನ್‌.ರವಿಕುಮಾರ್‌, ವಿಧಾನಪರಿಷತ್‌ ಸದಸ್ಯ.

ಆಗಸ್ಟ್‌ 1ರವರೆಗೆ ಕೆ.ಸಿ. ವ್ಯಾಲಿಯಲ್ಲಿ ಎರಡು ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ಹಾಯಿಸದಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಕೆ.ಸಿ.ವ್ಯಾಲಿಗೆ ಸೇರುವ ಕಲುಶಿತ ನೀರನ್ನು ಪರೀಕ್ಷಿಸಿ ವರದಿ ಪಡೆದುಕೊಳ್ಳಿ. ವರದಿಯ ಒಂದು ಪ್ರತಿಯನ್ನು ನನಗೂ ನೀಡಿ ಎಂದು ಸೂಚಿಸಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next