ಬೆಂಗಳೂರು ಒಂದೆಡೆ ಸರ್ಕಾರ ಆರ್ಥಿಕ ಮಿತವ್ಯಯದ ಜಪ ಮಾಡುತ್ತದೆ. ಮತ್ತೂಂದೆಡೆ ಸರ್ಕಾರಿ ಇಲಾಖೆಗಳೇ ತಮಗೆ ಬರಬೇಕಾದ ಹಣವನ್ನು ಹಲವು ವರ್ಷಗಳಿಂದ ವಸೂಲು ಮಾಡದೆ ಬಾಕಿ ಉಳಿಸಿಕೊಂಡಿವೆ.
ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಡಿ ನಗರದಲ್ಲಿ ದೇವಾಲಯಗಳ ಸುಪರ್ದಿಯಲ್ಲಿ ನಡೆಸುವ ಕೆಲವು ಶಿಕ್ಷಣ ಹಾಗೂ ವಾಣಿಜ್ಯ ಸಂಸ್ಥೆಗಳು ಲಕ್ಷಾಂತರ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು, ಅವುಗಳ ಮೊತ್ತ ಸುಮಾರು 6 ರಿಂದ 7 ಕೋಟಿ ರೂಪಾಯಿ ಆಗುತ್ತದೆ. ಈ ಹಣದಲ್ಲಿ ಆಯಾ ದೇವಾಲಯಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಆದರೆ, ನಿಯಮಿತವಾಗಿ ಬಾಡಿಗೆ ಬಾರದಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ. ದತ್ತಿ ಇಲಾಖೆಯಡಿ ರಾಜ್ಯದಲ್ಲಿ ಒಟ್ಟು 34,336 ಹಾಗೂ ರಾಜಧಾನಿಯಲ್ಲಿ 1,065 ದೇವಾಲಯಗಳು ಬರುತ್ತವೆ. ನಗರದಲ್ಲಿನ ಬಹುತೇಕರು ಸುಮಾರು ನಾಲ್ಕೈದು ವರ್ಷಗಳಿಂದ ಬಾಡಿಗೆ ಹಣವನ್ನು ಪಾವತಿಸದೆ, ಪ್ರತಿ ದೇವಾಲಯವು ಲಕ್ಷಗಟ್ಟಲೇ ಹಣ ಬಾಕಿ ಉಳಿಸಿಕೊಂಡಿವೆ.
ಇದರಲ್ಲಿ ನಗರದಲ್ಲಿನ ಹಲವು ದೇವಸ್ಥಾನಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಹೆಚ್ಚಿವೆ ಎನ್ನಲಾಗಿದೆ. ಮಲ್ಲೇಶ್ವರ ರಾಘವೇಂದ್ರ ಆಂಜನೇಯಸ್ವಾಮಿ ದೇವಸ್ಥಾನದ ಜಾಗದಲ್ಲಿರುವ ಅಂಗಡಿಯವರು ಒಟ್ಟು 83,42,600 ರೂ. ಬಾಡಿಗೆಯನ್ನು ಒದಗಿಸಬೇಕಿದೆ. ಚಾಮರಾಜಪೇಟೆಯ ಮಿಂಟೋ ಆಂಜನೇಯಸ್ವಾಮಿ ದೇವಾಲಯದಡಿ ಇರುವ ಚಾಮರಾಜಪೇಟೆ ಶಾಖೆಯು ಪ್ರತಿಷ್ಠಿತ ಹಣಕಾಸು ಸಂಸ್ಥೆಯೊಂದು 66,93,302 ರೂ. ಹಾಗೂ ಆದಾಯ ತೆರಿಗೆ ಸಂಸ್ಥೆಯು 3.53 ಲಕ್ಷ ರೂ.ಗಳನ್ನು ದತ್ತಿ ಇಲಾಖೆಗೆ ಬಾಡಿಗೆ ನೀಡಬೇಕಿದೆ. ಕೆ.ಜಿ. ರಸ್ತೆಯಲ್ಲಿರುವ ಬಂಡಿಶೇಶಮ್ಮ ದೇವಾಲಯವು 87 ಸಾವಿರ ರೂ., ಬಳೆ ಪೇಟೆಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿನ ಸಂಸ್ಥೆಯಿಂದ 2.18ಲಕ್ಷ ಬಾಡಿಗೆ ಹಣ ಬಾಕಿ ಇದ್ದರೆ, ಚಾಮರಾಜಪೇಟೆಯ ಕರಿಕಲ್ಲು ಆಂಜ ನೇಯ ದೇವಾಲಯಕ್ಕೆ ಸಂಬಂಧ ಜಾಗದಲ್ಲಿರುವ ಬಹುತೇಕ ಅಂಗಡಿಗಳು 3 ಕೋಟಿ ಪಾವತಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾಕಿ ಉಳಿಯಲು ಪರೋಕ್ಷವಾಗಿ ಇಲಾಖೆ ತೆಗೆದುಕೊಂಡ ನಿರ್ಧಾರವೂ ಕಾರಣವಾಗಿದೆ. ಮಲ್ಲೇಶ್ವರದಲ್ಲಿರುವ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಾಲಯದ ಪ್ರದೇಶದಲ್ಲಿರುವ ವಿದ್ಯಾ ಮಂದಿರ ವಿದ್ಯಾ ಸಂಸ್ಥೆಯು ಸುಮಾರು 40 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, 2016ರ ಮೊದಲು ಚದರಡಿಗೆ 30 ರೂ.ನಂತೆ ಬಾಡಿಗೆ ನೀಡುತ್ತಿತ್ತು. ಅದರಂತೆ ತಿಂಗಳಿಗೆ 4.12 ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದರು. ತದನಂತರ ಚದರಡಿಗೆ 77 ರೂ.ಗಳನ್ನು ಹೆಚ್ಚಿಸಿತು. ಆಗ ತಿಂಗಳಿಗೆ 10.52 ಲಕ್ಷ ರೂ. ಕಟ್ಟಬೇಕಿದೆ. ಆದರೆ, ದೇವಸ್ಥಾನ ಆವರಣದಲ್ಲಿ ಬಹುತೇಕ ದತ್ತಿ ಶಿಕ್ಷಣ ಸಂಸ್ಥೆಗಳೂ ಇವೆ. ಅವೆಲ್ಲವೂ ಬಡಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುತ್ತಿವೆ. ಅಂತಹ ಸಂಸ್ಥೆಗಳಿಗೆ ಇಲಾಖೆ ಈ “ದುಬಾರಿ ಬಾಡಿಗೆ’ ಹೊರೆಯಾಗಿ ಪರಿಣಮಿಸಿದೆ. ಅಷ್ಟಕ್ಕೂ ದೇವಸ್ಥಾನದ ಸಮಿತಿಗಳು, “ಸಮಾಜ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಏಕಾಏಕಿ ಚದರಡಿಗೆ ದುಪ್ಪಟ್ಟು ಹಣ ಹೆಚ್ಚಿಸಿದರೆ ಪಾವತಿಸುವುದು ಹೇಗೆ ಎಂದು ವಿರೋಧಿಸಿ, ಬಾಡಿಗೆ ನೀಡಲು ನಿರಾಕರಿಸುತ್ತಿದ್ದಾರೆ.
ಕೋರ್ಟ್ ಮೊರೆ ಹೋದ ಬಾಡಿಗೆದಾರರು : ಸರ್ಕಾರವು ನಿಗದಿಪಡಿಸಿದ ಬಾಡಿಗೆ ಹಣವು ಅಧಿಕವಾಗಿದ್ದು, ಸಮಾಜ ಸೇವೆ ಹಾಗೂ ವಿದ್ಯಾ ದಾನವನ್ನು ನೀಡುವ ದೇವಾಲಯಗಳಿಗೆ ಬಾಡಿಗೆ ದರವನ್ನು ದುಪ್ಪಟ್ಟು ಮಾಡುವುದು ಸರಿಯೇ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಚದರಡಿಗೆ ಸರಿಯಾದ ಬೆಲೆಯನ್ನು ನಿಗದಿಪಡಿಸಿದರೆ ಮಾತ್ರ ಬಾಡಿಗೆ ಕಟ್ಟುತ್ತೇವೆ ಎನ್ನುವುದು ಬಾಡಿಗೆದಾರರ ವಾದ.
ಹಣ ಬಂದರೆ ದೇಗುಲ ಅಭಿವೃದ್ಧಿಗೆ ಬಳಕೆ: ಬಾಕಿ ಇರುವ ಸುಮಾರು ಆರರಿಂದ ಏಳು ಕೋಟಿ ರೂ. ಇಲಾಖೆಗೆ ಬಂದಿದ್ದರೆ, ಬಾಡಿಗೆ ಹಣದಿಂದ ಆಯಾ ದೇವಾಲ ಯದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತಿತ್ತು. ಜತೆಗೆ ದೇವಾಲಯಗಳಿಗೆ ಮೂಲಸೌಕರ್ಯ, ಕಟ್ಟಡ ಕಾಮಗಾರಿ, ನೌಕರರಿಗೆ ವೇತನದಲ್ಲಿ ಹೆಚ್ಚಳ, ದೇವರಿಗೆ ಚಿನ್ನಾಭರಣಗಳ ಖರೀದಿಗೆ ಬಳಸಲಾಗುತ್ತಿತ್ತು ಎಂಬುದು ಅಧಿಕಾರಿಗಳ ವಾದ.
ದತ್ತಿ ಇಲಾಖೆಯಡಿ ಬರುವ ದೇವಾಲಯ, ಶಿಕ್ಷಣ ಸಂಸ್ಥೆ ಹಾಗೂ ವಾಣಿಜ್ಯ ಸಂಸ್ಥೆಗಳಿಂದ ಕಡ್ಡಾಯವಾಗಿ ಬಾಡಿಗೆ ಸಂಗ್ರಹಿಸಬೇಕು ಎಂದು ಸರ್ಕಾರ ಅಥವಾ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ. ಇಲಾಖೆಯು ಈ ಬಗ್ಗೆ ಕ್ರಮ ಕೈಗೊಂಡರೆ, ಅದನ್ನು ನಾವು ಪಾಲಿಸುತ್ತೇವೆ.
-ಎಸ್.ಆರ್.ಅರವಿಂದ ಬಾಬು, ಮುಜರಾಯಿ ತಹಶೀಲ್ದಾರ್
-ಭಾರತಿ ಸಜ್ಜನ್