Advertisement

ಮೋದಿ ಸರಕಾರದಿಂದ ಹೊಸ ರೂಪ ಪಡೆದ ದೇಗುಲಗಳು

12:31 AM Oct 12, 2022 | Team Udayavani |

ಮಹಾಕಾಲೇಶ್ವರ ಮಾತ್ರವಲ್ಲ, ಇದಕ್ಕೂ ಮೊದಲು ಹಲವು ಪ್ರಮುಖ ದೇಗುಲಗಳಿಗೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಹೊಸ ರೂಪ ಕೊಟ್ಟು, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿವೆ. ಅವುಗಳ ಮಾಹಿತಿ ಇಲ್ಲಿದೆ.

Advertisement

ಕಾಶಿ ವಿಶ್ವನಾಥ ಕಾರಿಡಾರ್‌
ಈ ಯೋಜನೆಯ ಮೊದಲ ಹಂತವನ್ನು ಪ್ರಧಾನಿ ಮೋದಿ ಕಳೆದ ಡಿಸೆಂಬರ್‌ನಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ. 339 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ 23 ಕಟ್ಟಡಗಳನ್ನು ಅನಾವರಣಗೊಳಿಸಲಾಗಿದೆ. ಪ್ರವಾಸಿಗರಿಗೆ ಸೇವೆ, ವೈದಿಕ ಕೇಂದ್ರ, ಮ್ಯೂಸಿಯಂ, ಗ್ಯಾಲರಿ, ಫ‌ುಡ್‌ಕೋರ್ಟ್‌ ಮತ್ತಿತರ ಸೌಲಭ್ಯಗಳಿವೆ. 5 ಲಕ್ಷ ಚದರ ಅಡಿ ಪ್ರದೇಶದಲ್ಲಿ ಈ ಕಾರಿಡಾರ್‌ ನಿರ್ಮಾಣಗೊಂಡಿದೆ.

ಕೇದಾರನಾಥ ಯೋಜನೆ
2013ರ ಮೇಘಸ್ಫೋಟದಲ್ಲಿ ಹಾನಿಗೀಡಾದ ರುದ್ರಪ್ರಯಾಗ್‌ನ ಕೇದಾರನಾಥ ದೇವಸ್ಥಾನದ ಮರುನಿರ್ಮಾಣ ಯೋಜನೆಯಿದು. ಕೇದಾರನಾಥ ಧಾಮ ಪ್ರದೇಶದ ಮರುನಿರ್ಮಾಣ ಮತ್ತು ಮರುಅಭಿವೃದ್ಧಿಯ 500 ಕೋಟಿ ರೂ.ಗಳ ಪ್ರಾಜೆಕ್ಟ್. 2017ರಲ್ಲಿ ಮೋದಿ ಅವರು ಇದಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಇಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನೂ ಅನಾವರಣಗೊಳಿಸಿದ್ದಾರೆ.

ಸೋಮನಾಥ ದೇಗುಲ
ಗುಜರಾತ್‌ನ ಸೋಮನಾಥ ದೇಗುಲದ ಟ್ರಸ್ಟ್‌ನ ಅಧ್ಯಕ್ಷ ಸ್ಥಾನವನ್ನು ಪ್ರಧಾನಿ ಮೋದಿ ಅಲಂಕರಿಸಿದ ಬಳಿಕ, ಅದರ ನವೀಕರಣ ಕಾರ್ಯ ಭರದಿಂದ ಸಾಗಿದೆ. 1.5 ಕಿ.ಮೀ. ಉದ್ದ, 27 ಅಡಿ ಅಗಲದ ಸಮುದ್ರ ದರ್ಶನ ಪಥ ನಿರ್ಮಿಸಲಾಗಿದೆ. ಇದರ ಮೂಲಕ ಪ್ರವಾಸಿಗರು ಸೋಮನಾಥ ದೇಗುಲದ ವೈಭವ ಮತ್ತು ಸಮುದ್ರದ ಅಭೂತಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಕಾಶ್ಮೀರ ದೇಗುಲ ನವೀಕರಣ
ಕಾಶ್ಮೀರಿ ಪಂಡಿತರ ವಲಸೆ ಬಳಿಕ ಮುಚ್ಚಲಾದ ಎಲ್ಲ ದೇಗುಲಗಳನ್ನು ಮರುಸ್ಥಾಪಿಸುವುದಾಗಿ ಸರಕಾರ ಘೋಷಿಸಿದೆ. ಅದರಂತೆ 1835ರಲ್ಲಿ ನಿರ್ಮಾಣಗೊಂಡ ರಘುನಾಥ ದೇಗುಲದ ನವೀಕರಣ ಕಾರ್ಯ ಆರಂಭವಾಗಿದೆ. ಜತೆಗೆ ಶೀತಲನಾಥ ದೇಗುಲವನ್ನು 31 ವರ್ಷಗಳ ಬಳಿಕ 2021ರ ಫೆಬ್ರವರಿಯಲ್ಲಿ ತೆರೆಯಲಾಗಿದೆ.

Advertisement

ರಾಮಮಂದಿರ
ಬರೋಬ್ಬರಿ 1,800 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಈಗಾಗಲೇ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ನೆಲಮಹಡಿಯಲ್ಲಿ 166 ಸ್ತಂಭಗಳನ್ನು ಅಳವಡಿಸಲಾಗುತ್ತಿದೆ. ದೇವಾಲಯವು ಗರ್ಭಗುಡಿಯಿರುವ ಮಹಡಿಯಿಂದ 161 ಅಡಿ ಎತ್ತರವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next