Advertisement

ಕಲಬುರಗಿ ವಿಮಾನ ನಿಲ್ದಾಣದಲ್ಲಿ ದೇವಸ್ಥಾನಗಳ ನೆಲಸಮ ಆರೋಪ : ನ.27ಕ್ಕೆ ಬಂಜಾರಾ ಸಮುದಾಯದ ಸಭೆ

09:52 AM Nov 24, 2019 | Hari Prasad |

ಕಲಬುರಗಿ: ಶುಕ್ರವಾರ ಉದ್ಘಾಟನೆಗೊಂಡ ಕಲಬುರಗಿ ವಿಮಾನ ನಿಲ್ದಾಣ ಆವರಣದಲ್ಲಿದ್ದ ಸಂತ ಸೇವಾಲಾಲ ಮತ್ತು ಮರಿಯಮ್ಮ ದೇವಿ ದೇವಸ್ಥಾನಗಳು ಮತ್ತು ದೇವರ ಮೂರ್ತಿಗಳು ಧ್ವಂಸಗೊಂಡಿರುವುದು ಭೂದಾನಿಗಳು ಹಾಗೂ ಅಲ್ಲಿದ್ದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಲಬುರಗಿಯಲ್ಲಿ ನ.27ರಂದು ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಬಂಜಾರಾ ಧರ್ಮಗುರುಗಳು, ಮುಖಂಡರ ಮಹತ್ವದ ಸಭೆಯನ್ನು ಅಖಿಲ ಭಾರತ ಬಂಜಾರಾ ಸೇವಾ ಸಮಿತಿ ಕರೆದಿದೆ.

Advertisement

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಂಜಾರಾ ಸಮುದಾಯದ ತಾಂಡಾಗಳ ಶೇ.90ರಷ್ಟು ಭೂಮಿಯನ್ನು ಒದಗಿಸಲಾಗಿದೆ. ಮದಿಯಾಳ ತಾಂಡಾ, ಮೋಕಿನ ತಾಂಡಾ, ಸಾಧು ನಾಯಕ ತಾಂಡಾ ಮತ್ತು ಶ್ರೀನಿವಾಸ ಸರಡಗಿ ಗ್ರಾಮದ ಗ್ರಾಮಸ್ಥರು ಹಾಗೂ ರೈತರು ತಮ್ಮ ಭೂಮಿಯನ್ನು ನೀಡಿದ್ದಾರೆ.

ಭೂ ದಾನ ಮಾಡುವ ಸಂದರ್ಭದಲ್ಲಿ ದೇವಸ್ಥಾನಗಳನ್ನು ಹಾಗೆ ಉಳಿಸಿಕೊಳ್ಳುವ ಭರವಸೆಯನ್ನು ಜಿಲ್ಲಾಡಳಿತದ ಅಧಿಕಾರಿಗಳು ನೀಡಿದ್ದರು. ಆದರೆ, ಈಗ ವಿಮಾನ ನಿಲ್ದಾಣದ ಉದ್ಘಾಟನೆಯ ಮುನ್ನ ದಿನ ದೇವಸ್ಥಾನಗಳನ್ನು ನೆಲಸಮ ಮಾಡಿದಲ್ಲದೇ ದೇವರ ಮೂರ್ತಿಗಳನ್ನು ಧ್ವಂಸಗೊಳಿಸಿದ್ದು ಘೋರ ಅಪರಾಧ. ವಿಮಾನ ನಿಲ್ದಾಣ ಉದ್ಘಾಟನೆಯು ಹಲವರಿಗೆ ಸಂಭ್ರಮದ ದಿನವಾಗಿದ್ದರೆ, ಭೂ ದಾನಿಗಳಿಗೆ ಕರಾಳ ದಿನವಾಗಿದೆ ಎಂದು ಬಂಜಾರಾ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಸುಭಾಷ ರಾಠೋಡ್ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಒಂಭತ್ತು ವರ್ಷಗಳಿಂದ ವಿಮಾನ ನಿಲ್ದಾಣದ ಕಾಮಗಾರಿ ಹಾಗೂ ಇತರ ಕಾರ್ಯ ಚಟುವಟಿಕೆಗಳು ನಡೆಯುತ್ತಲೇ ಇದೆ. ಕಳೆದ ವರ್ಷ ಪ್ರಾಯೋಗಿಕ ವಿಮಾನ ಹಾರಾಟ ನಡೆದಿದೆ. ನಂತರದಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಅನೇಕರು ವಿಮಾನದಲ್ಲೇ ಬಂದು ನಿಲ್ದಾಣದಲ್ಲಿ ಇಳಿದಿದ್ದಾರೆ. ಆಗ ದೇವಸ್ಥಾನಗಳಿಂದ ಯಾವುದೇ ಅಡ್ಡಿಯಾಗಿರಲಿಲ್ಲ. ಈಗ ತಾಂತ್ರಿಕ ತೊಡಕುಗಳ ನೆಪ ಹೇಳಿಸಿ ದೇವಸ್ಥಾನಗಳನ್ನು ನೆಲ ಮಾಡಲಾಗಿದೆ.

ಇದಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದತ್ತ ಬೊಟ್ಟು ತೋರಿಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿವೆ. ಆದರೆ, ಈ ಹಿಂದೆ ದೇವಸ್ಥಾನಗಳ ಅಸ್ತಿತ್ವದ ಬಗ್ಗೆ ಅನೇಕ ಬಾರಿ ಚರ್ಚೆಗಳು ನಡೆದಿವೆ. ಆಗ ದೇವಸ್ಥಾನಗಳನ್ನು ಉಳಿಸಿಕೊಳ್ಳುವ ವಾಗ್ದಾನ ನೀಡಲಾಗಿತ್ತು. ಆದರೆ ಇದೀಗ ಏಕಾಏಕಿ ದೇವಸ್ಥಾನಗಳ ಸಮೇತ ಮೂರ್ತಿಗಳನ್ನೂ ಧ್ವಂಸ ಮಾಡಿರುವುದರಿಂದ ಆಸ್ತಿಕ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ರಾಠೋಡ್ ಅಭಿಪ್ರಾಯಪಟ್ಟರು.

Advertisement

ವಿಮಾನ ಹಾರಾಟ ಹಾಗೂ ಇತರ ಯಾವುದೇ ಕಾರಣಗಳಿಗೆ ದೇವಸ್ಥಾನಗಳ ಅಡ್ಡಿಯಾಗಿದ್ದರೆ, ಮೂರ್ತಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕಿತ್ತು. ಮೂರ್ತಿಗಳನ್ನೇ ಧ್ವಂಸಗೊಳಿಸಿದ್ದು ಭೂದಾನಿಗಳು ಹಾಗೂ ಅಲ್ಲಿ ನೂರಾರು ವರ್ಷಗಳಿಂದ ಆರಾಧಿಸಿಕೊಂಡು ಬಂದಿದ್ದ ಗ್ರಾಮಸ್ಥರಿಗೆ ನೋವುಂಟು ಮಾಡಿದೆ. ದೇವಸ್ಥಾನಗಳ ನೆಲ ಸಮ ಮಾಡಿದ ಘಟನೆಯ ವಿಷಯ ತಿಳಿದು ವಿಮಾನ ನಿಲ್ದಾಣ ಉದ್ಘಾಟನಾ ಸಂದರ್ಭದಲ್ಲೇ ವಿಮಾನ ನಿಲ್ದಾಣ ಪಕ್ಕದ ಕಲಬುರಗಿ-ಸೇಡಂ ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ ಮಾಡಲಾಗಿದೆ.

ಈ ಸಂಬಂಧ ಪ್ರತಿಭಟನಾಕಾರರ ಮೇಲೆ ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತಪ್ಪಿತಸ್ಥರನ್ನು ಗುರುತಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಮತ್ತು ಅದೇ ಸ್ಥಳದಲ್ಲಿಯೇ ಮೂರ್ತಿಗಳನ್ನು ಮರು ಪ್ರತಿಷ್ಠಾಪನೆ ಮಾಡಬೇಕೆಂದು ರಾಠೋಡ್ ಒತ್ತಾಯಿಸಿದರು.

ಸಭೆಗೆ ಜಾಧವ್ ಗೂ ಆಹ್ವಾನ: ವಿಮಾನ ನಿಲ್ದಾಣ ಆವರಣದಲ್ಲಿದ್ದ ಸಂತ ಸೇವಾಲಾಲ ಮತ್ತು ಮರಿಯಮ್ಮ ದೇವಿ ದೇವಸ್ಥಾನಗಳ ಧ್ವಂಸಕ್ಕೆ ಆಡಳಿತ ವರ್ಗದ ಭಾಗವೇ ಅಗಿರುವ ಸಂಸದ ಡಾ.ಉಮೇಶ ಜಾಧವ್ ಕೂಡ ಹೊಣೆಗಾರರು ಆಗುತ್ತಾರೆ. ಅವರು ಬಂಜಾರಾ ಸಮುದಾಯದವರೇ ಆಗಿರುವುದರಿಂದ ನ.27ರಂದು ನಡೆಯುವ ಧರ್ಮಗುರುಗಳ ಸಭೆಗೆ ಸಂಸದ ಜಾಧವ್ ರನ್ನು ಕರೆಸುತ್ತೇವೆ. ಸಭೆಯಲ್ಲಿ ಸಮಗ್ರವಾಗಿ ಸಮಾಲೋಚನೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಸುಭಾಷ್ ರಾಠೋಡ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next