Advertisement
ಭಕ್ತಾದಿಗಳು ಮೊದಲ ದಿನ ದೇಗುಲಗಳಲ್ಲಿ ತಮ್ಮ ಇಷ್ಟದೇವರ ದರ್ಶನ ಪಡೆದರು. ಇದರ ಜೊತೆಗೆ, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಹೊಟೇಲ್‌ಗಳೂ ಕಾರ್ಯಾರಂಭ ಮಾಡಿವೆ.
ಅಯೋಧ್ಯೆಯಲ್ಲಿರುವ ದೇಗುಲಗಳಿಗೆ ಸೋಮವಾರ ಬೆಳಗ್ಗೆಯಿಂದಲೇ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು. ಗೋರಖ್‌ಪುರದಲ್ಲಿ ಗೋರಖ್‌ನಾಥ ದೇಗುಲದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪೂಜೆ ಸಲ್ಲಿಸಿದರು. ಹಲವಾರು ಪುಣ್ಯ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದ ಪಶ್ಚಿಮ ಭಾಗದಲ್ಲಿ ಅನೇಕರು ದೇಗುಲಗಳಿಗೆ ಆಗಮಿಸಿ ದೇವರ ದರ್ಶನ ಪಡೆದರು. ಲಕ್ನೋದಲ್ಲಿರುವ ಈದ್ಗಾ ಮಸೀದಿಯಲ್ಲೂ ಹಲವಾರು ಜನರು ಸೇರಿ ಪ್ರಾರ್ಥನೆ ಸಲ್ಲಿಸಿದರು.
Related Articles
ತಿರುಪತಿ ದೇವಸ್ಥಾನವನ್ನು ಜೂ. 11ರಿಂದ ಭಕ್ತಾದಿಗಳಿಗೆ ಮುಕ್ತವಾಗಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೂ ದೇಗುಲದ ಆಡಳಿತ ಮಂಡಳಿ ಸದಸ್ಯರು, ದೇಗುಲದ ಸಿಬ್ಬಂದಿಗೆ ಮಾತ್ರ ಪ್ರವೇಶವಿರುತ್ತದೆ. ಆದರೂ, ಸಾಮಾನ್ಯವಾಗಿ ದಿನವೊಂದಕ್ಕೆ 80,000ದಿಂದ 1 ಲಕ್ಷದವರೆಗೆ ಹರಿದು ಬರುವ ಭಕ್ತ ಸಾಗರವನ್ನು ಸಾಮಾಜಿಕ ಅಂತರ ಹಾಗೂ ಇನ್ನಿತರ ಮಾರ್ಗಸೂಚಿಗಳ ಅನುಸಾರವಾಗಿ ನಿಯಂತ್ರಿಸುವುದನ್ನು ಪ್ರಾಯೋಗಿಕವಾಗಿ ಕಲಿಯಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.
Advertisement
ಹಾಗಾಗಿ, ದೇಗುಲ ದರ್ಶನಕ್ಕೆ ಈಗಾಗಲೇ ಆನ್‌ಲೈನ್ ಮೂಲಕ ಅನುಮತಿ ಪಡೆದವರಲ್ಲಿ ಸೋಮವಾರ 6,873 ಜನರಿಗೆ ಮಾತ್ರ ದೇವಸ್ಥಾನದೊಳಕ್ಕೆ ಕಾಲಿಡಲು ಅವಕಾಶ ಕಲ್ಪಿಸಲಾಗಿತ್ತು. ಮತ್ತೂಂದೆಡೆ, ತಿರುಮಲಕ್ಕೆ ಆಗಮಿಸುವ ಭಕ್ತರು ಅಪಾರವಾಗಿ ನಿರೀಕ್ಷಿಸುವ ತೀರ್ಥ ಪ್ರಸಾದವನ್ನು ನೀಡಲು ಅನುಮತಿ ನೀಡಬೇಕೆಂದು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್, ಕೇಂದ್ರ ಸರಕಾರಕ್ಕೆ ಪತ್ರದ ಮುಖೇನ ಮನವಿ ಮಾಡಿದೆ.
ಹೊಸದಿಲ್ಲಿಸಿಖ್ಖರ ಪ್ರಮುಖ ಆರಾಧನಾ ಸ್ಥಳವಾದ ಬಾಂಗ್ಲಾ ಸಾಹೀಬ್ ಗುರುದ್ವಾರದಲ್ಲಿ ಬೆಳಗ್ಗೆಯಿಂದಲೇ ಭಕ್ತಾದಿಗಳು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಒಳಗಡೆ ಭಕ್ತರ ನಡುವೆ 6 ಅಡಿಗಳ ಸಾಮಾಜಿಕ ಅಂತರ ನಿಯಮ ವಿಧಿಸಲಾಗಿತ್ತು. ಜಾಮಾ ಮಸೀದಿಯಲ್ಲೂ ಸಾಮಾಜಿಕ ಅಂತರದಡಿಯಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಎಲ್ಲರಿಗೂ ಫೇಸ್ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಪ್ರಾರ್ಥನೆಗೆ ಆಗಮಿಸುವ ಭಕ್ತಾದಿಗಳು ಕೈ ತೊಳೆಯಲು ಉಪಯೋಗಿಸುವ ಹೌಜ್ (ನೀರಿನ ತೊಟ್ಟಿ) ಬಳಕೆಗೆ ನಿರ್ಬಂಧ ವಿಧಿಸಲಾಗಿತ್ತು.
ಮಹಾರಾಷ್ಟ್ರ
ಅನ್‌ಲಾಕ್ 1.0ದ ಮೊದಲ ದಿನವಾದ ಸೋಮವಾರದಂದು, ಯಾವುದೇ ದೇಗುಲ, ಹೋಟೆಲ್, ರೆಸ್ಟೋರೆಂಟ್ ತೆರೆಯಲಿಲ್ಲ. ಸೋಂಕು ಹರಡುವಿಕೆ ಅಧಿಕವಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿತ್ತು. ಆದರೆ, ಖಾಸಗಿ ಕಚೇರಿಗಳು ಶೇ. 10ರಷ್ಟು ಸಿಬ್ಬಂದಿಯನ್ನಿಟ್ಟುಕೊಂಡು ಕಚೇರಿ ನಿರ್ವಹಿಸಿದವು. ಮುಂಬಯಿನಲ್ಲಿ ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೆ„ ಆ್ಯಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಸಂಸ್ಥೆಯು ತಮ್ಮ ಸಿಬ್ಬಂದಿಗೆ ಮಾತ್ರ ಸೇವೆಯನ್ನು ಒದಗಿಸಿತು. ಗುಜರಾತ್
ಅಹಮದಾಬಾದ್‌ನಲ್ಲಿರುವ ಇಸ್ಕಾನ್ ಕ್ಷೇತ್ರದಲ್ಲಿ ಟೋಕನ್ ವ್ಯವಸ್ಥೆಯಡಿ ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತಾದಿಗಳ ಒಳ ಪ್ರವೇಶಕ್ಕಿರುವ 4 ನಾಲ್ಕು ಗೇಟ್‌ಗಳಲ್ಲಿ ಎರಡನ್ನು ಮಾತ್ರ ತೆರೆಯಲಾಗಿತ್ತು. ಪ್ರತಿ ನಿರ್ದಿಷ್ಟ ಅವಧಿಯಲ್ಲಿ ಕೇವಲ 25 ಜನರಿಗಷ್ಟೇ ಪ್ರವೇಶ ಕಲ್ಪಿಸಲಾಗುತ್ತಿತ್ತು. ರಾಜ್ಯದ ಇತರ ಕಡೆಯಲ್ಲಿನ ಪ್ರಾರ್ಥನಾ ಸ್ಥಳಗಳಲ್ಲೂ ಇದೇ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ತಮಿಳುನಾಡು
ದೇಶದಲ್ಲಿ ಅತೀ ಹೆಚ್ಚು ಸೋಂಕಿತರಿರುವ 2ನೇ ರಾಜ್ಯವೆನಿಸಿರುವ ತಮಿಳುನಾಡಿನಲ್ಲಿ, ಸಾರ್ವಜನಿಕ ಸ್ಥಳಗಳಿಗೆ ಜನರ ಪ್ರವೇಶವನ್ನು ನಿರಾಕರಿಸಲಾಗಿತ್ತು. ಹೊಟೇಲ್‌ಗಳು, ರೆಸ್ಟೋರೆಂಟ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ರಾಜ್ಯ ಸರಕಾರ, ಏರ್ ಕಂಡೀಶನ್ ಆನ್ ಮಾಡದಂತೆ, ಹೊಟೇಲ್‌ನ ಒಟ್ಟಾರೆ ಆಸನ ಸಾಮರ್ಥಯದಲ್ಲಿ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಕಲ್ಪಿಸುವಂತೆ ಸೂಚಿಸಿದೆ. ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಬಳಕೆ ಗೊಂದಲ ದೇಗುಲ ತೆರೆಯಲು ಹಿಂದೇಟು
ಆಲ್ಕೋಹಾಲ್‌ಯುಕ್ತ ಸ್ಯಾನಿಟೈಸರ್‌ಗಳನ್ನು ಭಕ್ತಾದಿಗಳಿಗೆ ಒದಗಿಸುವುದು ದೇಗುಲಗಳ ಆಡಳಿತ ಮಂಡಳಿಗಳ ಕರ್ತವ್ಯವೆಂದು ಕೇಂದ್ರ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಸಂದಿಗ್ಧ ಸ್ಥಿತಿಗೆ ಸಿಲುಕಿರುವ ಉತ್ತರ ಪ್ರದೇಶದ ಮಥುರಾ, ಬೃಂದಾವನ, ಇಸ್ಕಾನ್, ಬಂಕೆ ಬಿಹಾರಿ, ಮುಕುಟ್ ಮುಖಾರವಿಂದ್, ಶ್ರೀ ರಂಗನಾಥ್ ಜೀ ದೇಗುಲಗಳ ಆಡಳಿತ ಮಂಡಳಿಗಳು ಭಕ್ತಾದಿಗಳ ದರುಶನಕ್ಕೆ ಸೋಮವಾರ ಅವಕಾಶ ಕಲ್ಪಿಸಲಿಲ್ಲ. ಸ್ಯಾನಿಟೈಸರ್ ಗೊಂದಲ ಇತ್ಯರ್ಥವಾದ ನಂತರ ಬಾಗಿಲು ತೆರೆಯುವ ನಿರೀಕ್ಷೆಯಿದೆ. ಆದರೆ, ಇಸ್ಕಾನ್ ದೇಗುಲ ಮಾತ್ರ ಜೂ. 15ರಿಂದ ಬಾಗಿಲು ತೆರೆಯುವುದಾಗಿ ಪ್ರಕಟಿಸಿದೆ. ಮತ್ತೂಂದೆಡೆ, ಶ್ರೀ ಕೃಷ್ಣ ಜನ್ಮಸ್ಥಾನ್ ದೇಗುಲ ಸೋಮವಾರ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿತ್ತು.
ಮಾಸಾಂತ್ಯದವರೆಗೆ 3 ರಾಜ್ಯಗಳಲ್ಲಿ ಲಾಕ್‌ಡೌನ್
ಪಶ್ಚಿಮ ಬಂಗಾಲ, ಮಿಜೋರಾಂನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಅವಧಿಯನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ. ಮಿಜೋರಾಂನಲ್ಲಿ ಮುಖ್ಯಮಂತ್ರಿ ಝೋರಮ್‌ತಂಗಾ ನೇತೃತ್ವದ ಸಭೆಯಲ್ಲಿ ಲಾಕ್‌ಡೌನ್ ವಿಸ್ತರಣೆಗೆ ನಿರ್ಧರಿಸಲಾಗಿದೆ. ಆದರೆ ಉಳಿದ ಈಶಾನ್ಯ ರಾಜ್ಯಗಳಲ್ಲಿ ದೇಗುಲಗಳು, ಪ್ರಾರ್ಥನಾ ಸ್ಥಳಗಳು, ಹೊಟೇಲ್‌ಗಳು ಪುನಾರಂಭಗೊಂಡಿವೆ. ಪಶ್ಚಿಮ ಬಂಗಾಳದಲ್ಲಿಯ ಸೋಂಕಿತರ ಸಂಖ್ಯೆ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಅನ್ನು ಮಾಸಾಂತ್ಯದವರೆಗೆ ವಿಸ್ತರಿಸಲಾಗಿದೆ. ಆದರೆ, ಕೋವಿಡ್ ಸಂಖ್ಯೆ ಕಡಿಮೆಯಿರುವ ಒಡಿಶಾದಲ್ಲಿ ಲಾಕ್‌ಡೌನ್ ಅವಧಿಯನ್ನು ಜೂ. 30ರವರೆಗೆ ವಿಸ್ತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.