Advertisement
ಮಹಿಳೆಯರ ಆಭರಣಗಳ ವ್ಯಾಮೋಹವನ್ನು ಅರಿತ ಚಿನ್ನದ ವ್ಯಾಪಾರಿಗಳು ವಿವಿಧ ವಿನ್ಯಾಸಗಳಲ್ಲಿ ಆಭರಣಗಳನ್ನು ಮಾರುಕಟ್ಟೆಗೆ ಬಿಡುತ್ತಾರೆ. ಇದಕ್ಕಾಗಿಯೇ ಹಂಬಲಿಸುವ ಆಭರಣ ಪ್ರಿಯರು ಬೆಲೆ ಬಗ್ಗೆ ತಲೆಕೆಡಿಸಿಕೊಳ್ಳದೆ ಖರೀದಿಗೆ ಮುಂದಾಗುತ್ತಾರೆ.ಯಾವುದೇ ಸಮಾರಂಭಕ್ಕೆ ತೆರಳುವಾಗಲೂ ಅದಕ್ಕೆ ತಕ್ಕಂತೆ ಒಡವೆಗಳನ್ನು ಧರಿಸುವ ಹೆಣ್ಮಕ್ಕಳು ಸೀರೆಗೆ ಅದ್ಧೂರಿ ಚಿನ್ನಗಳನ್ನು ಧರಿಸಿ ಕಾರ್ಯಕ್ರಮಗಳಲ್ಲಿ ಮಿಂಚುತ್ತಾರೆ. ಕೆಲ ವರ್ಷಗಳ ಕಾಲ ಸಿಂಪಲ್ ಚೈನ್, ಒಂದು ಓಲೆ, ಎರಡು ಬಳೆಗಳಲ್ಲಿ ಸಮಾರಂಭ ಮುಗಿಸುತ್ತಿದ್ದ ಮಹಿಳೆಯರು ಈಗ ಟೆಂಪಲ್ ವಿನ್ಯಾಸದ ಆಭರಣಗಳ ಬೆನ್ನು ಬಿದ್ದಿದ್ದಾರೆ.
Related Articles
Advertisement
ಸಮಾರಂಭಗಳಲ್ಲಿ ಗ್ರ್ಯಾಂಡ್ ಲುಕ್ ಬೇಕೆಂದರೆ ಈ ಜುವೆಲರಿ ಧರಿಸಬಹುದು. ದೊಡ್ಡದೊಡ್ಡ ನಟಿಯರಿಂದ ಹಿಡಿದು ಸಾಮಾನ್ಯ ಮಹಿಳೆಯರ ತನಕ ಈ ವಿನ್ಯಾಸದ ಆಭರಣಗಳಿಗೆ ಮಾರುಹೋಗದವರಿಲ್ಲ.
ಒಂದೇ ಸರದಿಂದ ಗ್ರ್ಯಾಂಡ್ ಲುಕ್ಹಿಂದೆಲ್ಲ ಗ್ರ್ಯಾಂಡ್ ಲುಕ್ ಬೇಕೆಂದರೆ ಮೂರು ನಾಲ್ಕು ಸರಗಳನ್ನು ಧರಿಸುತ್ತಿದ್ದವರು ಈಗ ಟೆಂಪಲ್ ಜುವೆಲರಿಯತ್ತ ಮನಸೋತಿದ್ದಾರೆ. ಚಿನ್ನ, ಬೆಳ್ಳಿ ಮತ್ತು ಅಮೂಲ್ಯವಾದ ಹರಳು- ಮುತ್ತುಗಳನ್ನು ಬಳಸಿ ಟೆಂಪಲ್ ಜುವೆಲರಿ ಆಭರಣ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಲಕ್ಷ್ಮೀ, ಸರಸ್ವತಿ, ಗಣಪತಿ, ಶ್ರೀಕೃಷ್ಣ ದೇವರ ಚಿತ್ರಗಳನ್ನು ಅಚ್ಚಿನ ಮಾದರಿಯಲ್ಲಿ ಟೆಂಪಲ್ ಜುವೆಲರಿ ವಿನ್ಯಾಸದಲ್ಲಿ ಬಳಸಲಾಗುತ್ತದೆ. ಹೆಚ್ಚಾಗಿ ಸಿಂಪಲ್ ಸರಕ್ಕೆ ದಪ್ಪವಾದ ಪೆಂಡೆಂಟ್‌ಗಳನ್ನು ಹಾಕಲಾಗುತ್ತದೆ. ಆದರೂ ಇದು ಗ್ರ್ಯಾಂಡ್ ಲುಕ್ ನೀಡುತ್ತದೆ. ಸರ ಮಾತ್ರವಲ್ಲದೆ ಕಿವಿಯೋಲೆ, ಸೊಂಟದ ಪಟ್ಟಿ ಮತ್ತು ಬಳೆಗಳ ವಿನ್ಯಾಸದಲ್ಲೂ ಟೆಂಪಲ್ ಜುವೆಲರಿ ಶೈಲಿ ಕಾಣಸಿಗುತ್ತದೆ. ಲಕ್ಷ್ಮೀ, ಗಿಳಿಗಳು ಜುಮುಕಿಯ ಅಂದವನ್ನು ಹೆಚ್ಚಿಸುತ್ತವೆ. ಕೈಬಳೆಗಳಲ್ಲೂ ಇದೇ ಮಾದರಿಯ ಜತೆಗೆ ಮಾವಿನಕಾಯಿ ವಿನ್ಯಾಸ, ಸಪ್ತ ಮಾತೃಕೆಯರು, ನಾಗರಹಾವಿನ ವಿನ್ಯಾಸವೂ ಜನಪ್ರಿಯವಾಗಿದೆ. ತೋಳುಬಂದಿ, ಕಾಲುಂಗರದಲ್ಲೂ ಈ ವಿನ್ಯಾಸ ಈಗ ಮೂಡಿಬರುತ್ತಿದೆ. ಲೈಟ್‌ವೈಟ್
ನೋಡಲು ಅಬ್ಬರವಾಗಿ ಕಾಣುವ ಇಂತಹ ಜುವೆಲರಿಯಲ್ಲಿ ಹಗುರವಾಗಿರುವ ಮತ್ತು ಹೆಚ್ಚು ಭಾರವಿರುವ ಆಭರಣಗಳ ಆಯ್ಕೆಗೆ ಅವಕಾಶವಿದೆ. ಹೆಚ್ಚು ತೂಕವಿರುವ ಆಭರಣ ದುಬಾರಿ ಎಂಬ ಕಾರಣಕ್ಕೆ ಲೈಟ್ ವೈಟ್ ಟೆಂಪಲ್ ಜುವೆಲರಿಗೆ ಹೆಚ್ಚಿನ ಬೇಡಿಕೆ ಇದೆ. ಟೆಂಪಲ್ ಜುವೆಲರಿಯ ವಿನ್ಯಾಸಗಳನ್ನು ತಯಾರಿಸುವ ಕುಶಲಕರ್ಮಿಗಳ ಸಂಖ್ಯೆ ಕಡಿಮೆ ಇದೆ. ತಮಗೆ ಇಷ್ಟವಾದ ದೇವರ ಚಿತ್ರಗಳನ್ನು ಬಂಗಾರವಾಗಿ ಧರಿಸಬೇಕು ಎಂದು ಇಷ್ಟಪಡುವ ಮಂದಿ ಜುವೆಲರಿ ಶಾಪ್ ಗಳಲ್ಲಿ ಖರೀದಿಸುವ ಬದಲು ಕುಶಲಕರ್ಮಿಗಳನ್ನು ಹುಡುಕಿ ತಮಗೆ ಬೇಕಾದ ವಿನ್ಯಾಸಗಳಲ್ಲಿ ಒಡವೆಗಳನ್ನು ಮಾಡಿಸಿಕೊಳ್ಳುತ್ತಾರೆ. ನೋಡಲು ಆಕರ್ಷಕ
ಟೆಂಪಲ್ ಜುವೆಲರಿ ಈಗೀನ ಟ್ರೆಂಡ್. ರೇಷ್ಮೆ ಮತ್ತು ಕಾಟನ್ ಸೀರೆಗಳಿಗೆ ಇದು ತುಂಬಾ ಚೆನ್ನಾಗಿ ಒಪ್ಪುತ್ತದೆ. ಯುವತಿಯರು ಹೆಚ್ಚಾಗಿ ಈಗ ಇಂತಹ ಆಭರಣಕ್ಕೆ ಹೆಚ್ಚಿನ ಬೇಡಿಕೆ ಇಡುತ್ತಿದ್ದಾರೆ. ದೇವರ ವಿಗ್ರಹ, ಗೋಪುರ ವಿನ್ಯಾಸದ ಆಭರಣಗಳು ನೋಡಲು ಆಕರ್ಷಕವಾಗಿರುತ್ತದೆ.
– ಶ್ರುತಿ ಎಸ್., ಉಪನ್ಯಾಸಕಿ ಬೇಡಿಕೆ ಹೆಚ್ಚಳ
ಸಿಂಪಲ್ ಡಿಸೈನ್‌ಗಳನ್ನು ಮಾತ್ರ ಇಷ್ಟಪಡುತ್ತಿದ್ದ ಜನರು ಈಗ ಟೆಂಪಲ್, ಆ್ಯಂಟಿಕ್ ಜುವೆಲರಿಗಳಿಗೆ ಮೊರೆ ಹೋಗುತ್ತಿದ್ದಾರೆ. ಇದರ ವಿನ್ಯಾಸಗಳು ಹೆವಿಯಾಗಿರುತ್ತದೆ. ಅದನ್ನು ತಯಾರಿಸಲು ಹೆಚ್ಚು ಸಮಯ ತಗಲುತ್ತದೆ. ಬಹುತೇಕ ಮಂದಿ ಅಂಗಡಿಗಳಿಗೆ ಬಂದು ಅವರಿಗಿಷ್ಟವಾಗುವ ದೇವರು ಹಾಗೂ ಇತರ ವಿನ್ಯಾಸಗಳನ್ನು ಹೇಳಿ ಮಾಡಿಸಿಕೊಳ್ಳುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದೆ.
– ಅರುಣ್, ಜುವೆಲರಿ ಶಾಪ್ ಮಾಲಕ ಪ್ರಜ್ಞಾ ಶೆಟ್ಟಿ