ಪೊಳಲಿ: ದೇವಸ್ಥಾನಗಳು ಸಂಸ್ಕಾರವನ್ನು ಉಳಿಸುವ ಕೇಂದ್ರಗಳು. ನಾವು ನಿರಂತರ ದೇಗುಲಗಳಿಗೆ ತೆರಳುವ ಮೂಲಕ ಸಂಸ್ಕಾರವಂತ ರಾಗಬೇಕು. ಬ್ರಹ್ಮಕಲಶೋತ್ಸವದಿಂದ ದೇವ ಸ್ಥಾನದ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿಗಳು ಸೋಮವಾರ ಆರಂಭಗೊಂಡಿದ್ದು, ಅದರ ಅಂಗವಾಗಿ ನಡೆದ ಮೊದಲ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರಕ್ಕೆ ಹರಿದುಬರುವ ಹೊರೆಕಾಣಿಕೆ ಗಳನ್ನು ಸಂಗ್ರಹಿಸುವ ಉಗ್ರಾಣಕ್ಕೆ ಇದೇ ವೇಳೆ ಶ್ರೀಗಳು ಮುಹೂರ್ತ ನೆರವೇರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಖ್ಯಸ್ಥ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಪೊಳಲಿಯ ಬ್ರಹ್ಮಕಲಶೋತ್ಸವದ ಭಾಗ್ಯ ದೊರಕಿರುವುದು ನಮ್ಮ ಪುಣ್ಯ. ಮಾತೆ ಶ್ರೀ ರಾಜರಾಜೇಶ್ವರೀ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.
ಶಾಸಕ-ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿಯ ಗೌರವಾಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಕಾರ್ಯದರ್ಶಿ-ಮೊಕ್ತೇಸರ ಯು. ತಾರಾನಾಥ ಆಳ್ವ, ಡಾ| ಎಂ. ಮೋಹನ ಆಳ್ವ, ಚೇರ ಸೂರ್ಯನಾರಾಯಣ ರಾವ್, ಬಂಟರ ಯಾನೆ ನಾಡವರ ಸಂಘದ ಮಾತೃ ಸಂಘ ಮಂಗಳೂರಿನ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಜಯರಾಮ್ ಭಟ್ ಪೊಳಲಿ, ಮೊಕ್ತೇಸರರಾದ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯು. ತಾರಾನಾಥ ಆಳ್ವ, ಶೆಡ್ಡೆ ಮಂಜುನಾಥ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಉದಯ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.
ಧರ್ಮಜಾಗೃತಿ
ವೇ|ಮೂ| ಕೋಡಿಮಜಲು ಕೆ. ಅನಂತ ಪದ್ಮನಾಭ ಉಪಾಧ್ಯಾಯ ಅವರು ಧಾರ್ಮಿಕ ಉಪನ್ಯಾಸ ನೀಡಿ, ಇಂದು ಮನುಜರು ಧಾರ್ಮಿಕ ಪ್ರಜ್ಞೆ ಕಳೆದುಕೊಂಡು, ಸಂಸ್ಕಾರ ವಿಹೀನರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಧಾರ್ಮಿಕ ಜಾಗೃತಿಯನ್ನುಂಟುಮಾಡುತ್ತವೆ ಎಂದರು.