ಬೆಂಗಳೂರು: ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಕ್ಯಾಂಟೀನ್ ನಿರ್ಮಾಣ ಪ್ರಸ್ತಾಪ ಕೈ ಬಿಡಲಾಗಿದ್ದು, ಬೇರೆ ಸ್ಥಳ ಹುಡುಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಕಾಂಪೌಂಡ್ ಅನ್ನು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ತೆರವುಗೊಳಿಸಿದ್ದರಿಂದ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು ಮಂಗಳವಾರ ಪಾಲಿಕೆಯ ಮಾಜಿ ಉಪ ಮೇಯರ್ ಲಕ್ಷ್ಮಿನಾರಾಯಣ ಹಾಗೂಮಾಜಿ ಸದಸ್ಯ ಬಿ.ವಿ.ಗಣೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್, ಸ್ಥಳೀಯರಿಗೆ ಮಾಹಿತಿ ನೀಡದೆ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆವರಣದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದ್ದು ಸರಿಯಲ್ಲ. ಕ್ಯಾಂಟೀನ್‌ಗೆ ಬೇರೆ ಜಾಗ ಹುಡುಕಿಕೊಳ್ಳಿ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ತೆರವು ಮಾಡಿರುವ ದೇವಾಲಯ ಕಾಂಪೌಂಡ್ ಪಾಲಿಕೆ ವತಿಯಿಂದಲೇ ನಿರ್ಮಿಸಿಕೊಡಿ ಇಲ್ಲದಿದ್ದರೆ ನನ್ನ ಸ್ವಂತ ವೆಚ್ಚದಲ್ಲಿ ನಿರ್ಮಿಸಿಕೊಡುತ್ತೇನೆ ಎಂದು ಹೇಳಿದರು. ಇದರೊಂದಿಗೆ ಕ್ಯಾಂಟೀನ್ ನಿರ್ಮಾಣ ವಿವಾದ ಅಂತ್ಯಗೊಂಡಿತು.ಉಪಮೇಯರ್ ಎಂ.ಆನಂದ್ ಉಪಸ್ಥಿತರಿದ್ದರು.
ಈ ಕುರಿತು ಪ್ರತಿಕ್ರಿಯಿದ ಸ್ಥಳೀಯ ಪಾಲಿಕೆ ಸದಸ್ಯೆ ಕೋಕಿಲಾ ಚಂದ್ರಶೇಖರ್, ಪಾಲಿಕೆಯ ಅಧಿಕಾರಿಗಳು ದೇವಸ್ಥಾನದ ಜಾಗದಲ್ಲಿ ಕ್ಯಾಂಟೀನ್ ನಿರ್ಮಿಸಲು ಮುಜರಾಯಿ ಇಲಾಖೆಯಿಂದ ಅನುಮತಿ ಪಡೆದುಕೊಂಡಿದ್ದಾರೆ. ಆದರೆ, ಸ್ಥಳೀಯ ಜನಪ್ರತಿನಿಗಳಿಗೆ ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆಯದೆ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದ್ದು, ಬಿಜೆಪಿಯರು ಕ್ಯಾಂಟೀನ್ ನಿರ್ಮಿಸದಂತೆ ಪ್ರತಿಭಟನೆ ನಡೆಸಿದ್ದಾರೆ.
ಆ ಹಿನ್ನೆಲೆಯಲ್ಲಿ ಬೇರೊಂದು ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಈ ಮಧ್ಯೆ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ , ಚಾಮರಾಜಪೇಟೆಯ ದೇವಾಲಯ ಜಾಗದಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಈಗಾಗಲೇ ಹೊಡೆದಿರುವ ಕಾಂಪೌಂಡನ್ನು ಪಾಲಿಕೆಯಿಂದ ಮರು ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದ್ದಾರೆ.