ಬೆಂಗಳೂರು: ಬರಗಾಲಕ್ಕೆ ತುತ್ತಾಗಿರುವ ರಾಜ್ಯ ಮುಂದಿನ ದಿನಗಳಲ್ಲಿ ಬಿಸಿಲಿನ ಬೇಗೆ ಎದುರಿಸಬೇಕಾದ ಸ್ಥಿತಿ ಬರಲಿದೆ.
ಮಳೆ ಕೊರತೆಯಿಂದ ತೇವಾಂಶ ಇಳಿಕೆಯಾಗಿ ಮುಂದಿನ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಈಗಿರುವುದಕ್ಕಿಂತ 2 ರಿಂದ 3 ಡಿ.ಸೆ. ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಹಲವು ವರ್ಷಗಳಿಂದ ಅಕ್ಟೋಬರ್, ನವೆಂಬರ್‌ನಲ್ಲಿ ಅಧಿಕ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಉಷ್ಣಾಂಶದ ತೀವ್ರತೆ ಗೊತ್ತಾಗುತ್ತಿರಲಿಲ್ಲ. ಈ ಬಾರಿ ಮಳೆ ಇಲ್ಲದೇ ಭೂಮಿಯಲ್ಲಿ ತೇವಾಂಶ ಇಳಿಕೆಯಾಗಿದೆ. ಇದರಿಂದ ನೀರಿನ ಅಂಶವಿಲ್ಲದೇ ಬೇಗೆ ಹೆಚ್ಚಾಗುವ ಅನುಭವ ಗೊತ್ತಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ ಮಾದರಿಯಲ್ಲೇ ಹಿಂಗಾರು ಮಳೆ ಕೊರತೆ ಬಾಧಿಸುವ ಲಕ್ಷಣ ಗೋಚರಿಸಿದ್ದು, ಮುಂದಿನ ವರ್ಷದವರೆಗೂ ಮಳೆಯ ಅಭಾವ ಉಂಟಾಗಲಿದೆ. ಎಲ್‌ನಿನೋ ಬಲವಾಗಿರುವುದೂ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಮಳೆ ಕೊರತೆಯಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಈಗಿರುವ ಉಷ್ಣಾಂಶಕ್ಕಿಂತ ಇನ್ನೂ ಗರಿಷ್ಠ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.
ಶೇ.60 ಮಳೆ ಕೊರತೆ: ರಾಜ್ಯದಲ್ಲಿ ಮಳೆ ಕೊರತೆ ಶೇ.60ರಷ್ಟಿದೆ. ನವೆಂಬರ್‌ನಲ್ಲಿ ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆ. ಮಳೆ ಕೊರತೆ ಮುಂದುವರೆಯಲಿದ್ದು, ವಾಡಿಕೆಗಿಂತ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಗಳು ಕಡಿಮೆಯಾಗಿವೆ. ಕನಿಷ್ಠ ಉಷ್ಣಾಂಶ ವಾಡಿಕೆಗಿಂತ ಕಡಿಮೆ ಇರಲಿದೆ. ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಕೊಡಗು, ಹಾಸನದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಬೆಂಗಳೂರಿನಲ್ಲಿ ವಾಡಿಕೆ ಮಳೆಯಾಗಿ ಉಷ್ಣಾಂಶ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ ?: ಭಾನುವಾರ ಕಾರವಾರದಲ್ಲಿ 36.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮಂಗಳೂರಿನಲ್ಲಿ 33.2, ಕಲಬುರಗಿ 34.4, ಬೆಂಗಳೂರು 29.8, ಧಾರವಾಡ 31.8, ಮೈಸೂರು 32., ದಾವಣಗೆರೆ 32., ಚಾಮರಾಜನಗರ 31.8, ರಾಯಚೂರು 32.6, ಹಾವೇರಿ 32.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.