ರಾಯಚೂರು: ಕಳೆದ ವರ್ಷಕ್ಕಿಂತ ಸರಾಸರಿ ಬಿಸಿಲಿನ ಪ್ರಮಾಣ ಕಡಿಮೆ ಇದ್ದರೂ ಈ ಬಾರಿಯೂ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಲಾಕ್‌ಡೌನ್ ಮಧ್ಯೆ ಬೇಸಿಗೆ ಪೂರ್ತಿ ಮನೆಯಲ್ಲೇ ಕಳೆದ ಜನರಿಗೆ ಕೊನೆಯಲ್ಲಿ ಬೇಸಿಗೆ ಬಿಸಿ ತಟ್ಟಿದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಮಳೆಯ ಹಿತಾನುಭವ ಆಗುತ್ತಿದ್ದರೆ; ಜಿಲ್ಲೆಯಲ್ಲಿ ಮಾತ್ರ ಉರಿ ಬಿಸಿಲಿಗೆ ಜನ ಬಸವಳಿದಿದ್ದಾರೆ. ಮನೆಗಳಲ್ಲಿದ್ದರೂ ಬಿಸಿ ಗಾಳಿಗೆ ತತ್ತರಿಸುವಂತಾಗಿದೆ. ಹಿಂದಿನ ಬೇಸಿಗೆಗೆ ಹೋಲಿಸಿದರೆ ಈ ಬಾರಿ ಸರಾಸರಿ 0.5ನಷ್ಟು ಉಷ್ಣಾಂಶ ಕಡಿಮೆಯಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ಹಿಂದಿನ ವರ್ಷ ಏಪ್ರಿಲ್‌ನಲ್ಲೇ ಬಿಸಿಲಿನ ಪ್ರಖರತೆ 42 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿತ್ತು. ಮೇನಲ್ಲಿ ಸಾಕಷ್ಟು ದಿನಗಳ ಕಾಲ 43 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿತ್ತು. ಈ ವರ್ಷ ಮಾರ್ಚ್ ಅಂತ್ಯಕ್ಕೆ ಲಾಕ್‌ಡೌನ್ ಶುರುವಾದ ಕಾರಣ ಜನ ಮನೆಯಿಂದ ಹೊರ ಬಂದಿಲ್ಲ. ಕೈಗಾರಿಕೆಗಳು, ವಾಹನ ದಟ್ಟಣೆಗಳಿಲ್ಲದೆ ವಾಯು ಮಾಲಿನ್ಯವೂ ಕುಗ್ಗಿ ಬಿಸಿಲಿನ ಪ್ರಮಾಣ ಕಡಿಮೆಯಾದ ಸಾಧ್ಯತೆಗಳಿವೆ. ಮೇ ತಿಂಗಳಾಂತ್ಯಕ್ಕೆ ಬೇಸಿಗೆ ಮುಗಿಯುತ್ತಿದ್ದಂತೆ ಉಷ್ಣಾಂಶದಲ್ಲಿ ಮತ್ತೆ ಏರಿಕೆ ಕಂಡಿದ್ದು, 43 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ.
ಕಲಬುರಗಿಯಲ್ಲಿ 44 ಡಿಗ್ರಿ: ಇನ್ನು ಕಲಬುರಗಿ ಜಿಲ್ಲೆಯಲ್ಲಿ 44.1 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ. ಬೀದರ್ 41.6, ವಿಜಯಪುರ 41.5 ಸೆಲ್ಸಿಯಸ್ ದಾಖಲಾಗಿದೆ. ಹೈ-ಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ 39.5 ಉಷ್ಣಾಂಶ ದಾಖಲಾಗಿದೆ. ಆದರೆ, ಅತಿ ಹೆಚ್ಚು ಬಿಸಿಲು ದಾಖಲಾಗಿರುವ ಜಿಲ್ಲೆಗಳ ಸಾಲಿನಲ್ಲಿ ಕಲಬುರಗಿ ಮೊದಲಾದರೆ ರಾಯಚೂರು ನಂತರದಲ್ಲಿದೆ.
ಕಳೆದ ವರ್ಷದ ಬಿಸಿಲಿನ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಸರಾಸರಿ 0.5 ಉಷ್ಣಾಂಶ ಕಡಿಮೆಯಾಗಿದೆ. ಕಳೆದ ಮೂರು ದಿನಗಳಿಂದ ಉಷ್ಣಾಂಶ ಹೆಚ್ಚಾಗಿ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ 29 ಡಿಗ್ರಿ ಸೆಲ್ಸಿಯಸ್ ಇದೆ. ಜೂನ್‌ನಿಂದ ಮಳೆಗಾಲ ಶುರುವಾಗಲಿದ್ದು, ಬಿಸಿಲಿನ ಪ್ರಮಾಣ ಕಡಿಮೆಯಾಗಲಿದೆ
. ಡಾ| ಶಾಂತಪ್ಪ ದುತ್ತರಗಾವಿ, ತಾಂತ್ರಿಕ ಅಧಿಕಾರಿ, ಹವಾಮಾನ ವಿಭಾಗ, ಕೃಷಿ ವಿವಿ ರಾಯಚೂರು