Advertisement

1960ರ ಬಳಿಕ ಇಂಗಾಲಾಮ್ಲ, 80ರ ಬಳಿಕ ತಾಪಮಾನ ಏರಿಕೆ: ಡಾ|ರಘು ಮುರ್ತುಗುಡ್ಡೆ

12:14 AM Sep 22, 2019 | Sriram |

ಉಡುಪಿ: 1980ರ ದಶಕದ ಬಳಿಕ ಜಾಗತಿಕ ತಾಪಮಾನ ಏರುಗತಿಯಲ್ಲಿದೆ ಎಂದು ಅಮೆರಿಕದ ಮೇರಿಲ್ಯಾಂಡ್‌ ವಿ.ವಿ.ಯ ಹಿರಿಯ ಭೂವಿಜ್ಞಾನಿ ಡಾ| ರಘು ಮುರ್ತುಗುಡ್ಡೆ ಹೇಳಿದ್ದಾರೆ.

Advertisement

ಮಣಿಪಾಲ ಮಾಹೆಯ ಗಾಂಧಿಯನ್‌ ಸೆಂಟರ್‌ ಫಾರ್‌ ಫಿಲಾಸಫಿಕಲ್‌ ಆರ್ಟ್ಸ್ ಆ್ಯಂಡ್‌ ಸೈನ್ಸಸ್‌ ಎಂಐಟಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಸಭೆಯಲ್ಲಿ ಅವರು “ಹವಾಮಾನ ಬದಲಾವಣೆ, ಸುಸ್ಥಿರತೆ ಮತ್ತು ಜಾಗತಿಕ ವಸ್ತುಸ್ಥಿತಿ’ ವಿಷಯ ಕುರಿತು ಮಾತನಾಡಿದರು.

1950ರ ಬಳಿಕ ವಾತಾವರಣದಲ್ಲಿ ಕಾರ್ಬನ್‌ ಡೈಯಾಕ್ಸೆ„ಡ್‌ ಅಂಶ ಏರುಪೇರು ಆಗುತ್ತಿದೆ. 1960ರ ಬಳಿಕ ಇದು ಏರುಗತಿಯಲ್ಲಿದೆ. ಭೂಮಿಯಲ್ಲಿ ಸಾಗರದಂತಹ ವ್ಯವಸ್ಥೆಗಳಿರುವುದರಿಂದ ಉತ್ಪಾದನೆಯಾಗುವ ವಿಷಾಂಶಗಳ ಪರಿಣಾಮಗಳು ಅಷ್ಟೊಂದು ಪರಿಣಾಮ ಬೀರುತ್ತಿಲ್ಲ ಎಂದರು.

ಸಕಾಲದಲ್ಲಿ ಮಳೆ ಬಾರದೆ ಇರುವುದು, ಮಳೆ ಬಂದರೂ ಒಂದೇ ಸಮನೆ ಬರುವುದು, ಒಂದು ಕಡೆ ಹೆಚ್ಚು ಮಳೆ ಬಂದರೆ ಇನ್ನಾವುದೋ ಒಂದು ಕಡೆ ಅದು ಕಡಿಮೆಯಾಗುವುದನ್ನು ಅನುಭವಿಸುತ್ತಿದ್ದೇವೆ. ಬಹುತೇಕ ಎಲ್ಲ ದೇಶಗಳೂ ಪರಿಸರ ನಾಶವನ್ನು ನಿರ್ಲಕ್ಷಿಸಿವೆ. ಇದರಿಂದ ಒಟ್ಟಾರೆ ಮಾನವ ಸುರಕ್ಷಿತವಾಗಿಲ್ಲ. ಹವಾಮಾನ ಸಮಸ್ಯೆ ಮುಂದೊಂದು ದಿನ ಭಾರೀ ಅಪಾಯಗಳನ್ನು ಸೃಷ್ಟಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಣ್ಣ ತಪ್ಪಾದರೂ ವಿಶ್ವದ ಮೇಲೆ ಪರಿಣಾಮ
ಸಣ್ಣ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಮಾಡಿದರೂ ಅದರ ಕೊಡುಗೆ ಇಡೀ ವಿಶ್ವದ ವ್ಯವಸ್ಥೆ ಮೇಲೆ ಆಗುತ್ತದೆ. ಹವಾಮಾನ ಬದಲಾವಣೆ ವಿಜ್ಞಾನಕ್ಕೆ ಸಂಬಂಧಿಸಿದೆಯಾದರೂ

Advertisement

ಇದರ ಪರಿಣಾಮ ರಾಜಕೀಯ ಮತ್ತು ಸಾಮಾಜಿಕವಾಗಿರುತ್ತದೆ. ಇದು ಹಣಕಾಸಿನ ಮೇಲೂ ಪರಿಣಾಮ ಬೀರುತ್ತದೆ. ಗ್ರೀನ್‌ಹೌಸ್‌ ಪರಿಣಾಮ ಪ್ರಕೃತಿಯ ಮೇಲೆ ಆಗುತ್ತಿದೆ ಎಂದರು.

ಎಂಐಟಿ ಜಂಟಿ ನಿರ್ದೇಶಕ ಡಾ| ಬಿಎಚ್‌ವಿ ಪೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ನಿರ್ದೇಶಕ ವರದೇಶ ಹಿರೆಗಂಗೆ ಸ್ವಾಗತಿಸಿ ಶ್ರೀರಾಜ್‌ ಗುಡಿ ಪರಿಚಯಿಸಿದರು.

ಮಾಲಿನ್ಯ ಕೊಡುಗೆ: ಸಿರಿವಂತರು, ಸಿರಿವಂತ ದೇಶ ಪ್ರಥಮ!
ಪರಿಸರ ಮಾಲಿನ್ಯದಲ್ಲಿ ಅಮೆರಿಕ, ಯೂರೋಪ್‌ ಮೊದಲ ಸ್ಥಾನದಲ್ಲಿವೆ. ಅಲ್ಲಿ ಪ್ರತಿಯೊಬ್ಬ ವರ್ಷಕ್ಕೆ 20 ಟನ್‌ ಪರಿಸರ ಮಾಲಿನ್ಯವನ್ನು ಹೊರಸೂಸುತ್ತಾನೆ. ಭಾರತದಲ್ಲಿ ತಲಾ 2 ಟನ್‌, ಚೀನದಲ್ಲಿ ತಲಾ 7.8 ಟನ್‌ ಇದೆ. ಭಾರತ ಮತ್ತು ಚೀನದಲ್ಲಿ ಜನಸಂಖ್ಯೆ ಹೆಚ್ಚಿಗೆ ಇರುವುದರಿಂದ ಸಿಒ2 ಹೊರಸೂಸುವಿಕೆ ಹೆಚ್ಚಿಗೆ ಇದೆ. ಆದರೆ ಇದುವೇ ಕಾರಣವೆನ್ನುವಂತಿಲ್ಲ. ಎರಡೇ ಮಕ್ಕಳನ್ನು ಹೊಂದಿದ ಮನೆಯವರು ಹತ್ತು ಮಕ್ಕಳು ಹೊಂದಿದ ಮನೆಯವರಿಂತ ಹೆಚ್ಚು ಹೆಚ್ಚು ತಿನ್ನಿಸುವುದರಿಂದ ಮೊದಲಯವರ ಪರಿಸರ ಮಾಲಿನ್ಯದ ಕೊಡುಗೆ ಜಾಸ್ತಿ ಇರುತ್ತದೆ. ಇದು ಆಹಾರ, ವಿದ್ಯುತ್‌, ವಾಹನ ಇತ್ಯಾದಿಗಳನ್ನು ಸಿರಿವಂತರು ಬಡವರಿಗಿಂತ ಹೆಚ್ಚು ಬಳಸುವುದರಿಂದ ಆಗುತ್ತದೆ. ಧಾನ್ಯ ಉತ್ಪಾದನೆಗೆ ಮಾಂಸ ಉತ್ಪಾದನೆಗಿಂತ ಹೆಚ್ಚು ನೀರು ಬೇಕು. ಆದರೆ ಮಾಂಸ ತಿಂದು ಅತ್ಯಾಧುನಿಕ ಕಾರನ್ನು ಚಲಾಯಿಸಿದರೆ ಧಾನ್ಯ ತಿಂದವನಗಿಂತ ಹೆಚ್ಚು ಪರಿಸರ ಮಾಲಿನ್ಯ ಕೊಟ್ಟಂತಾಗುತ್ತದೆ. ಒಟ್ಟಾರೆ ಹಣ ಗಳಿಸಿ ಸಂತೋಷಪಡುವ ಜತೆಗೆ ಪರಿಸರ ಉಳಿಸುವ ಸಕಾರಾತ್ಮಕ ಮನೋಭಾವನೆ ಅಗತ್ಯ.
-ಡಾ| ರಘು ಮುರ್ತುಗುಡ್ಡೆ

ಮೊದಲು ಭೂಮಿ, ಕೊನೆಗೆ ಮಾನವ!
ಸುಮಾರು 4.5 ಬಿಲಿಯ ವರ್ಷಗಳ ಹಿಂದೆ ಭೂಮಿ ಉತ್ಪತ್ತಿಯಾಯಿತು. ಹಂತಾನುಹಂತದಲ್ಲಿ ಕೊನೆಯಲ್ಲಿ ಜನಿಸಿದ ತಳಿಯೇ ಮಾನವ. ಈಗ ಮಾನವ ಚಂದ್ರ, ಮಂಗಳನಲ್ಲಿ ಹೋಗಿರಬಹುದು. ಮಾನವ ಎಲ್ಲೆಲ್ಲಿ ಇದ್ದಾನೋ ಅಲ್ಲಲ್ಲಿ ಭೂಮಿಯ ಮೇಲೆ ದಬ್ಟಾಳಿಕೆ ನಡೆಸಿದ್ದಾನೆ. ಚಿಂತನೆ, ಕ್ರಿಯಾಶೀಲತೆಯ ಜತೆ ಪರಿಸರ ಹಾನಿಗೂ ಮಾನವ ಕಾರಣನಾಗುತ್ತಿದ್ದಾನೆ ಎಂದು ಮುರ್ತುಗುಡ್ಡೆ ವಿಶ್ಲೇಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next