ಹೈದರಾಬಾದ್ : 21ರ ಹರೆಯದ ತೆಲುಗು ಟಿವಿ ನಟಿ ನಾಗಾ ಝಾನ್ಸಿ ಇಲ್ಲಿನ ತನ್ನ ಫ್ಲ್ಯಾಟಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಮಾ ಟಿವಿ ಯಲ್ಲಿ ಪ್ರಸಾರಗೊಂಡಿದ್ದ ಪವಿತ್ರ ಬಂಧನ್ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದಿದ್ದ ಝಾನ್ಸಿ ಅನೇಕ ಚಿತ್ರಗಳಲ್ಲೂ ನಟಿಸಿದ್ದರು.
ಝಾನ್ಸಿಯ ಫ್ಲ್ಯಾಟಿನ ಡೋರ್ ಬೆಲ್ ಎಷ್ಟು ಒತ್ತಿದರೂ ಒಳಗಿಂದ ಪ್ರತಿಕ್ರಿಯೆ ಬಾರದಿದ್ದಾಗ ಆಕೆಯ ಸಹೋದರ ದುರ್ಗಾ ಪ್ರಸಾದ್ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಆಕೆಯ ದೇಹ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದುದು ಕಂಡು ಬಂತು.
ಪೊಲೀಸರು ಹೇಳಿರುವ ಪ್ರಕಾರ ‘ನಟಿಯು ಘಟನೆ ನಡೆದ ವೇಳೆ ತನ್ನ ಫ್ಲ್ಯಾಟಿನಲ್ಲಿ ಒಬ್ಬಳೇ ಇದ್ದು ಸಾವಿಗೆ ಸ್ವಲ್ಪವೇ ಹೊತ್ತು ಮೊದಲು ಯಾವುದೋ ವ್ಯಕ್ತಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಆ ವ್ಯಕ್ತಿಗೆ ನಟಿಯು ಕಳೆದ ಆರು ತಿಂಗಳಿಂದ ನಿಕಟವಾಗಿದ್ದಳು’.
ಪೊಲೀಸರು ನಟಿಯ ಮೃತ ದೇಹವನ್ನು ಸರಕಾರಿ ಗಾಂಧಿ ಅಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ.