ಕೆ.ಆರ್.ನಗರ: ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮುನ್ನ ಇಲಾಖೆಯ ಅಧಿಕಾರಿಗಳು ಮತ್ತು ತಜ್ಞರ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಟಿ.ಕೀರ್ತಿ ಹೇಳಿದರು.
ತಾಲೂಕಿನ ಚುಂಚನಕಟ್ಟೆಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕೃಷಿ ಅಭಿಯಾನದ ಅಂಗವಾಗಿ “ಇಲಾಖೆಗಳ ನಡಿಗೆ-ರೈತರ ಮನೆ ಬಾಗಿಲಿಗೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದರ ಜತೆಗೆ ಇಲಾಖೆ ನಡೆಸುವ ತರಬೇತಿಗಳಲ್ಲೂ ರೈತರು ಭಾಗವಹಿಸಿ ಕೃಷಿ ಮಾಹಿತಿ ತಿಳಿದುಕೊಳ್ಳಬೇಕು. ಸರ್ಕಾರದಿಂದ ದೊರೆಯುವ ರಿಯಾಯಿತಿ ಸವಲತ್ತು ಮತ್ತು ಇತರ ಅನುಕೂಲತೆಗಳ ಬಗ್ಗೆ ತಿಳಿಸಲು ತರಬೇತಿ ಶಿಬಿರ ಮತ್ತು ಪ್ರಾತ್ಯಕ್ಷಿತೆ ನಡೆಸಿ ಹೆಚ್ಚು ಪ್ರಚಾರ ಮಾಡಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ರಂಗರಾಜನ್ ಮಾತನಾಡಿ, ರೈತರು ನಿರಂತರವಾಗಿ ಕೃಷಿ ಇಲಾಖೆಯ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಆಗಾಗ ರೈತ ಸಂಪರ್ಕ ಕೇಂದ್ರ ಮತ್ತು ಮಾದರಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ಕೃಷಿ ಭಾಗ್ಯ ಯೋಜನೆಯಡಿ ಸವಲತ್ತುಗಳು ಸಿಗುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಹೊಂಬಯ್ಯ ಮಾತನಾಡಿ, ಭತ್ತದ ಬೆಳೆಯಲ್ಲಿ ಆಧುನಿಕ ಕೃಷಿ ಪದ್ಧತಿ-ರೋಗ ನಿಯಂತ್ರಣಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಶು, ಕೃಷಿ, ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಸಮುದಾಯ ಭವನದ ಆವರಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ತಾಪಂ ಸದಸ್ಯರಾದ ಮಮತಾ, ರತ್ನಮ್ಮ, ಕುಪ್ಪೆ ಗ್ರಾಪಂ ಅಧ್ಯಕ್ಷೆ ಪ್ರೇಮಕುಮಾರ್, ಸದಸ್ಯರಾದ ಮಮತಾ, ರೇಣುಕ, ರಾಮಕ್ಕ, ನಂದಿನಿ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ರಮೇಶ್, ನಿರ್ದೇಶಕರಾದ ಶಿವಸ್ವಾಮಿ, ವಿವೇಕಾನಂದ, ಚುಂಚನಕಟ್ಟೆ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಗಳಾದ ಪ್ರಸನ್ನ ಮತ್ತಿತರರಿದ್ದರು.