ಕೊನೆಯವರೆಗೂ ನಿನ್ನ ಜೊತೆಯಲ್ಲಿರಬೇಕೆಂಬ ಹಂಬಲ. ನಿನ್ನನ್ನು ಹೇಗಾದರೂ ಪಡೆಯಬೇಕೆಂಬ ಹುಚ್ಚು ಹಠ. ಹಾಗಾದ್ರೆ ಪೀತಿ ಅಂದ್ರೆ ಏನು? ಸ್ವಾರ್ಥವೇ ಅಥವಾ ತ್ಯಾಗವೇ? ಅದೇಕೋ ಗೊತ್ತಿಲ್ಲ, ನೀನು ಬೇಕೆಂದು ನನ್ನ ಮನಸ್ಸು ಚಿಕ್ಕ ಮಗುವಿನಂತೆ ಹಠ ಮಾಡುತ್ತಿದೆ. ಅದನ್ನು ಸಂತೈಸಲು ನನ್ನಿಂದಾಗ್ತಾ ಇಲ್ಲ. ನಿ ಸಿಗದೆ ಅದು ಸುಮ್ಮನಾಗೋ ಲಕ್ಷಾಣಾನೂ ಕಾಣಿಸ್ತಾ ಇಲ್ಲ.
ಸದ್ಯಕ್ಕಂತೂ ನಿರೀಕ್ಷೆಗಳೇ ಬದುಕಾಗಿವೆ. ನಿನ್ನ ಅಗಲಿಕೆಯಿಂದಾಗಿರುವ ನೋವು, ದುಃಖವನ್ನು ಹೇಗೆ ವಿವರಿಸೋದು? ನನಗ್ಯಾಕೆ ಈ ಶಿಕ್ಷೆ ಕೊಟ್ಟೆ? ನೀನು ನನ್ನನ್ನು ನಿಜಕ್ಕೂ ಮರೆತೇಬಿಟ್ಟೆಯಾ? ಜಗತ್ತನ್ನೇ ಮರೆತ ನನಗೆ ನಿನ್ನನ್ನು ಮಾತ್ರ ಮರೆಯಲಾಗುತ್ತಿಲ್ಲ. ಯಾಕೆ ಗೊತ್ತಾ, ನಿನ್ನನ್ನು ನಾನು ಅಷ್ಟೊಂದು ಪ್ರೀತಿಸಿದ್ದೆ, ಆರಾಧಿಸಿದ್ದೆ.
ನೀನಿದ್ದಾಗ ಕನಸು ಕಾಣುವುದನ್ನೇ ಬಿಟ್ಟಿದ್ದೆ. ಆಗ ನೀನೇ ನನ್ನ ಕನಸು, ಮನಸು ಆಗಿದ್ದೆ. ಆದರೆ, ಈಗ ಮತ್ತೆ ಕನಸು ಕಾಣಲು ಆರಂಭಿಸಿದ್ದೇನೆ. ಯಾಕಂದ್ರೆ, ಕನಸಿನಲ್ಲಾದರೂ ನೀನು ಬರ್ತೀಯಾ, ಆಗಲಾದ್ರೂ ನಿನ್ನ ನೋಡಬಹುದು ಅನ್ನೋ ಆಸೆಯಿಂದ. ಆದರೇನು ಮಾಡುವುದು? ಕನಸು ಮುಗಿದ ಮೇಲೆ ಮತ್ತೆ ಅದೇ ನೋವು, ನಿರಾಸೆ.
ಈ ಶಿಕ್ಷೆಗೊಂದು ಕಾರಣವಾದ್ರೂ ಇರಬೇಕಲ್ಲ? ನನ್ನ ತಪ್ಪೇನು ಅಂತ ಹೇಳಿಬಿಡು. ಅದನ್ನೆಲ್ಲ ಸರಿಪಡಿಸಿಕೊಳ್ತೀನಿ. ಮುಂದೆಂದೂ ತಪ್ಪಾಗದಂತೆ ನಡೆದುಕೊಳ್ತೀನಿ.
ಇಂತಿ ನಿನ್ನ
ನೇತ್ರಾವತಿ ಎಂ.