ಪ್ರೀತಿ, ಬದುಕಿನ ನಿಜವಾದ ಆಶಾವಾದದ ಕಿರಣ. ಮನುಷ್ಯ ಕೇವಲ ಹೊಟ್ಟೆಗಾಗಿ ಮಾತ್ರ ದುಡಿಯುತ್ತಿಲ್ಲ. ಪ್ರೀತಿ ಯಾರಲ್ಲಿ ಹುಟ್ಟುತ್ತದೋ ಅವರೇ ಪ್ರೀತಿಯನ್ನು ತುಂಬಬಲ್ಲರು. ಈ ಮಾತು ನಿಜಕ್ಕೂ ಸತ್ಯ. ಹಾಗಾಗಿ, ನಿನ್ನ ಪುಟ್ಟ ಹೃದಯದ ಮೇಲೆ ಹುಟ್ಟಿರುವ ನನ್ನ ಪ್ರೀತಿಯನ್ನು ನಾನೇ ತುಂಬಬೇಕು ಅಲ್ವಾ? ಹಾಗಾಗಿ, ಅದು ಸುಳ್ಳೇ ಆಗಲಿ, ನಿಜವೇ ಆಗಲಿ. ನೀನೊಮ್ಮೆ ಹೇಳಿಬಿಡು ಗೆಳತಿ. ಮನದ ಭಾವನೆಗಳನ್ನು ಅದೆಷ್ಟು ದಿನ ನಿನ್ನೊಳಗೆ ಅದುಮಿಟ್ಟುಕೊಂಡಿರುತ್ತೀಯ?
ನನಗೂ ಗೊತ್ತು, ನಿನ್ನ ಮನಸ್ಸಲ್ಲಿ ತುಂಬಿದ ಸಾಗರದಷ್ಟು ಪ್ರೀತಿಗೆ ಸಾವಿರ ಕನಸುಗಳನ್ನು ತುಂಬಿಸುವ ಆಸೆಯಿದೆ ಎಂದು. ಗುಬ್ಬಿಯಂತೆ ಕಣ್ಮುಚ್ಚಿ ಮಲಗಿದ ಆ ನಿನ್ನ ಮುದ್ದು ತುಟಿಯಂಚಲಿ ಸೂಸುತಿರುವ ನಗೆಗೆ ನಾ ಕಾರಣವಾಗಿದ್ದರೆ ಅದನೊಮ್ಮೆ ಹೇಳಿಬಿಡು.
ಅಂದೆಂದೋ ಆಕಸ್ಮಿಕವಾಗಿ ಆದ ಪರಿಚಯ; ಹೀಗೆ ಸಿಕ್ಕಾಗಲೊಮ್ಮೆ ಸಣ್ಣದಾದ ಮುಗುಳ್ನಗು. ಇವೆಲ್ಲಾ ಪದೇ ಪದೆ ಕಾಡುತ್ತಿರುವುದು ಯಾವುದರ ಸಂಕೇತ? ಗೊತ್ತಿಲ್ಲ; ಎಲ್ಲದಕ್ಕೂ ಉತ್ತರ ಹುಡುಕ ಹೊರಟರೆ ನನಗೆ ನಾನೇ ಒಂದು ಪ್ರಶ್ನೆಯಾಗಿ ಉಳಿದುಬಿಡುವಿನೇನೋ ಎಂಬ ಭಯ! ಆದರೂ, ನಿನ್ನ ಮನದ ಇಂಗಿತವನ್ನು ನಾನು ಒಮ್ಮೆ ಕೇಳುವಾಸೆ. ಕಡಲ ಅಲೆಗಳು ತೀರಕ್ಕೆ ಬಂದು ಮರಳನ್ನು ಅಪ್ಪುವಂತೆ, ನಿನ್ನ ಪ್ರೀತಿಯ ಅಲೆಗಳು ಬಂದು ನನ್ನೊಮ್ಮೆ ತಬ್ಬಿಬಿಡಲಿ ಅನ್ನೋ ಸಾಗರದಷ್ಟು ಬಯಕೆ ನನ್ನಲ್ಲಿ ತುಂಬಿದೆ ಗೆಳತಿ. ಅಲೆಗಳ ಮೋಹದಲ್ಲಿ ಮರಳ ಮೇಲೆ ಬರೆದ ಹೆಸರು ಇನ್ನೂ ಅಳಿಸಿಲ್ಲ. ತೀರದ ಅಂಚಲ್ಲಿ ನಿನ್ನೊಟ್ಟಿಗೆ ಕುಳಿತು ಸಂಜೆಯ ತಂಪಲ್ಲಿ, ದೂರದ ಸಾಗರದ ಅಲೆಗಳ ಮೇಲೆ ತೇಲುವ ಆ ದೋಣಿಗಳನ್ನು ನೋಡುವ ಆಸೆ ಇನ್ನೂ ಇದೆ. ಆದರೆ, ನಿನ್ನ ಆಗಮನಕ್ಕಾಗಿ ಕಾದೂ ಕಾದು ಈ ಸಂಜೆ ಯಾಕಾಗಿದೆ ನೀನಿಲ್ಲದೆ? ಅನಿಸಿದ್ದಂತೂ ಸುಳ್ಳಲ್ಲ.
ನಿನಗೆ ಗೊತ್ತಾ? ಬೆಳದಿಂಗಳು ಸುರಿಸುವ ಆ ಚಂದ್ರನಿಗೂ ಒಮ್ಮೊಮ್ಮೆ ಬೇಸರ ಬರುತ್ತದೆಯೇನೋ ಅನಿಸಿಬಿಟ್ಟಿದೆ. ಏಕೆಂದರೆ, ಆ ಚಂದ್ರನೂ ಕೂಡ ನಿನ್ನ ಆ ಮುಂಗುರುಳ ಸಲ್ಲಾಪ ಕಂಡು ಸೋತುಬಿಟ್ಟಿದ್ದಾನೆ. ಅದಕ್ಕಾಗಿಯೇ ಹುಣ್ಣಿಮೆ ಬೆಳಕಿನಲ್ಲಿ ನಿನ್ನ ಅಂದ ಇನ್ನಷ್ಟು ಹೆಚ್ಚಿ, ಹಾಲಿನ ಕನ್ಯೆಯಂತೆ ಕಂಗೊಳಿಸುತ್ತೀಯ. ನಿನ್ನ ಮುಂಗುರುಳ ಆಟಕ್ಕೆ ಆ ಚಂದ್ರನೇ ಶರಣಾಗಿರುವಾಗ ಇನ್ನು ನಾನು ಶರಣಾಗಿದ್ದರಲ್ಲಿ ತಪ್ಪೇನಿದೆ?
ಗೆಳತಿ, ಪ್ರೀತಿ ಅರಮನೆ ತುಂಬ ನಿನ್ನದೇ ಆಡಳಿತ ನಡೆಸುವುದಕ್ಕೆ ನೀನೊಮ್ಮೆ ಬಂದುಬಿಡು. ಅದು ಸುಳ್ಳಾದರೂ ಸರಿಯೆ, ಒಮ್ಮೆ ಹೇಳಿಬಿಡು ಗೆಳೆಯ ನಾ ನಿನ್ನದೇ ನೆರಳೆಂದು.
ಲಕ್ಷ್ಮೀಕಾಂತ್ ಎಲ್. ವಿ